ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯ ಸರ್ಕಾರ ಪಿ.ಟಿ.ಸಿ.ಎಲ್, ಕಾಯ್ದೆ 2023ರಲ್ಲಿ ತಿದ್ದುಪಡಿ ಮಾಡಿದ್ದರು ಸಹ ಉಚ್ಚನ್ಯಾಯಲಯ ಕಾಯ್ದೆ ವಿರುದ್ಧವಾಗಿ ಆದೇಶಗಳನ್ನು ಮಾಡುತ್ತಿರುವುದರಿಂದ ಮಖ್ಯಮಂತ್ರಿಗಳು ಗಂಭಿರವಾಗಿ ಪರಿಗಣಿಸಿ ಉನ್ನತ ಮಟ್ಟದ ಹಿರಿಯ ನ್ಯಾಯವಾದಿಗಳ ತಂಡ ರಚಿಸಿ ಸರ್ವೋಚ್ಚ ನ್ಯಾಯಲಯದಲ್ಲಿ ತಡೆಯಾಜ್ಞೆ ಮತ್ತು ಆದೇಶ ಆಗುವ ಬಗ್ಗೆ ಕ್ರಮ ವಹಿಸುವಂತೆ ಒತ್ತಾಯಿಸಿ ಜನವರಿ 6 ರಿಂದ ನಿರಂತರ ಪ್ರತಿಭಟನೆ ಮಾಡಲಾಗುವುದು ಎಂದು ಪ್ರಜಾ ವಿಮೋಚನಾ ಚಳುವಳಿಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು PTCL ಕಾಯ್ದೆಯು ತುಳಿತಕ್ಕೊಳಗಾದ ಜನಾಂಗದ ಅಭಿವೃದ್ಧಿ ಮತ್ತು ಉದ್ದಾರಕ್ಕಾಗಿ ಸರ್ಕಾರ 1978-79ರಲ್ಲಿ ಕಾಯ್ದೆ ಜಾರಿಗೆ ತಂದ ನಂತರ SC/ST ಜನರಿಗೆ ಮಾಂಜೂರಾದ ಜಮಿನುಗಳನ್ನು ಪರಬಾರೆ ಮಾಡಲು ಸರ್ಕಾರದ ಪೂರ್ವನುಮತಿ ಕಡ್ಡಾಯ ಎಂಬ ಷರತ್ತು ಇತ್ತು. ಕಾಯ್ದೆ ಉಲ್ಲಂಘಿಸಿ ಭೂಮಿ ಪರಬಾರೆ ಆಗಿದ್ದಲ್ಲಿ ಮರು ಮಂಜೂರಾತಿ ಕೋರಿ ಮಂಜೂರುದಾರರು ACರವರಿಗೆ ಅರ್ಜಿ ಸಲ್ಲಿಸಲು ಕಾಲಮಿತಿ ಇರಲಿಲ್ಲ.
ಆದರೆ ನೆಕ್ಕಂಟಿ ರಾಮಲಕ್ಷ್ಮೀ V/S ಕರ್ನಾಟಕ ಸರ್ಕಾರದ ಪ್ರಕರಣ ಸಂಬಂಧಿಸಿದಂತೆ ದಿ: 26-10-2017ರಲ್ಲಿ ಸರ್ವೋಚ್ಚ ನ್ಯಾಯಲಯ “ಸಮುಚಿತ ಸಮಯದೊಳಗೆ” ಅರ್ಜಿ ಸಲ್ಲಿಸಬೇಕೆಂದು ಆದೇಶ ಮಾಡಿದ್ದು ನಿರ್ದಿಷ್ಟವಾಗಿ ಇಂತಿಷ್ಟು ವರ್ಷಗಳು ಎಂದು ಹೇಳದಿದ್ದರು ಈ ಆದೇಶದ ನಂತರ AC, DC ಉಚ್ಚನ್ಯಾಯಗಳಲ್ಲಿ ದಾಖಲಿಸಿದ್ದ ಸಾವಿರಾರು ಪ್ರಕರಣಗಳು ಕಾಯ್ದೆ ವಿರುದ್ದವಾಗಿ ಆದೇಶಗಳಾಗಿರುವುದನ್ನು ಖಂಡಿಸಿ ಕಾಲಮಿತಿ ರದ್ದುಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 2022ರಲ್ಲಿ ರಾಜ್ಯಾದ್ಯಾಂತ ದಲಿತ ಚಳವಳಿಗಾರರು ಹೋರಟಗಳನ್ನು ನಡೆಸಲಾಗಿತ್ತು.
ನಂತರ ಕ್ರಾಂಗೆಸ್ ಪಕ್ಷದ ಸರ್ಕಾರ ರಚನೆಯಾಗಿ ಸಿದ್ದಾರಾಮಯ್ಯನವರು ಕಾಲಮಿತಿ ಇಲ್ಲವೆಂದು PTCL ಕಾಯ್ದೆಗೆ ತಿದ್ದುಪಡಿಯನ್ನು ಮೊದಲ ಸಂಪುಟದ ಸಭೆಯಲ್ಲಿ ಮಂಡಿಸಿ ದಿನಾಂಕ : 27-07-2023ರಲ್ಲಿ ಜಾರಿಗೊಳಿಸಿದರು. ಇದರಿಂದ ರಾಜ್ಯದ ಲಕ್ಷಾಂತರ SC/ST ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆಯ ಮಾರ್ಗ ಕಲ್ಪಿಸಿದ್ದು ಸ್ವಾಗತಾರ್ಹ ವಿಷಯವೇ ಆಗಿತ್ತು.
ರಾಜ್ಯ ಸರ್ಕಾರ PTCL ಕಾಯ್ದೆಗೆ ಕಾಲಮಿತಿ ಇಲ್ಲ ಎಂದು ತಿನ್ನುಪಡಿ ತಂದಿರುವುದನ್ನು ಮಾನ್ಯ ಉಚ್ಚನ್ಯಾಯಲವು ಪರಿಗಣಿಸದೆ ಕಾಯ್ದೆ ವಿರುದ್ಧವಾಗಿ 2024ರ ನವೆಂಬರ್ ತಿಂಗಳಿನಲ್ಲಿ ಸುಮಾರು 50ಕ್ಕೂ ಹೆಚ್ಚು ಆದೇಶಗಳನ್ನು ಮಾಡಿದ್ದು, ಪ್ರತಿದಿನ ಹತ್ತಾರು ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ನೆಕ್ಕಂಟಿ ರಾಮಲಕ್ಷ್ಮೀ V/S ಕರ್ನಾಟಕ ಸರ್ಕಾರದ ತಿರ್ಪಿನ ಆದೇಶ ಉಲ್ಲೇಖಿಸಿ ವಜಾ ಮಾಡಲಾಗುತ್ತಿದೆ ಎಂದರು.
ಉಚ್ಚನ್ಯಾಯಲಯವು ಕಾಯ್ದೆಯನ್ನು ಪರಿಗಣಿಸದೆ ವಿರುದ್ಧವಾಗಿ ಆದೇಶಗಳನ್ನು ಮಾಡುತ್ತಿರುವುದರಿಂದ ಸರ್ಕಾರ ಉನ್ನತ ಮಟ್ಟದ ಹಿರಿಯ ವಕೀಲರ ತಂಡ ರಚಿಸಿ ಉಚ್ಚನ್ಯಾಯಲಯ ಮಾಡಿರುವ ಎಲ್ಲಾ ಆದೇಶಗಳಿಗೆ ಸರ್ವೋಚ್ಚ ನ್ಯಾಯಲಯದಲ್ಲಿ ತಡೆಯಾಜ್ಞೆ ಮಾಡಿಸಿ ಕಾಯ್ದೆಯ ಪರವಾಗಿ ಆದೇಶ ಆಗುವ ಬಗ್ಗೆ ಶೀಘ್ರವಾಗಿ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಸಮಾಜಿ ಕಲ್ಯಾಣ ಸಚಿವರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಪ್ರ ಕಾರ್ಯದರ್ಶಿ ಆದೂರು ದೇವರಾಜ್, ಎಸ್.ಕೆ. ಮಾದೇಶ್, ತಾಲ್ಲೂಕು ಅಧ್ಯಕ್ಷ ಶಿವು, ಜಿಲ್ಲಾ ಅಧ್ಯಕ್ಷ ರಾಘವೇಂದ್ರ, ಮುಖಂಡ ಮಂಜುನಾಥ್ ಸೇರಿದಂತೆ ಪ್ರಜಾವಿಮೋಚನಾ ಚಳುವಳಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.