ಇ.ಡಿ ಸಮನ್ಸ್ ಪ್ರಶ್ನಿಸಿ ಅನಿಲ್ ಗೌಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿಯನ್ನು ಅಕ್ರಮ ಬೆಟ್ಟಿಂಗ್​ ಆರೋಪದಲ್ಲಿ ಬಂಧಿಸಲಾಗಿದೆ. ಅಲ್ಲದೆ ಕೆಲ ದಾಖಲೆ ಒದಗಿಸುವಂತೆ ಇ.ಡಿ (ಜಾರಿ ನಿರ್ದೇಶನಾಲಯ) ನೀಡಿರುವ ಸಮನ್ಸ್ ಪ್ರಶ್ನಿಸಿ ಆರ್.ಆರ್ ನಗರದ ಹನುಮಂತರಾಯಪ್ಪ ಪುತ್ರ ಅನಿಲ್ ಗೌಡ ಸಲ್ಲಿಸಿದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ಆದೇಶವನ್ನು ಮುಂದಿನ ಸೋಮವಾರ ಪ್ರಕಟಿಸುವುದಾಗಿ ಹೇಳಿದೆ.

ಇಡಿ ತನಗೆ ಜಾರಿ ಮಾಡಿರುವ ಸಮನ್ಸ್​ ಪ್ರಶ್ನಿಸಿ ಅನಿಲ್ ಗೌಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚ್ಚಿನ್ ಶಂಕರ್ ಮುಗ್ದಂ ಅವರ ಏಕಸದಸ್ಯ ಪೀಠವು ನ್ಯಾಯಾಲಯ ಆದೇಶ ಪ್ರಕಟಿಸುವವರೆಗೂ ಅನಿಲ್ ಗೌಡ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಇ.ಡಿಗೆ ನ್ಯಾಯಪೀಠ ಸೂಚಿಸಿದೆ.ಅರ್ಜಿದಾರ ಪರ ವಕೀಲರು ವಿಚಾರಣೆ ವೇಳೆ, ಅರ್ಜಿದಾರರು ವೃತ್ತಿಯಲ್ಲಿ ವಕೀಲರಾಗಿದ್ದು, ಈ ನೆಲೆಯಲ್ಲಿ ಕೆ.ಸಿ.ವೀರೇಂದ್ರರಿಗೆ ಸಲಹೆ ನೀಡಿದ್ದಾರೆ ಅಷ್ಟೇ. ಇದನ್ನು ಪರಿಗಣಿಸದೇ ಅವರನ್ನು ವಿನಾಕಾರಣ ಇ.ಡಿ. ಅಧಿಕಾರಿಗಳು ವಿಚಾರಣೆಗೊಳಪಡಿಸುವುದಕ್ಕೆ ಮುಂದಾಗಬಾರದು. ಇ.ಡಿ.ಯ ವ್ಯಾಪ್ತಿ ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ. ಈ ಎಲ್ಲ ಅಂಶದ ಮೇರೆಗೆ ಇ.ಡಿ ಜಾರಿಗೊಳಿಸಿದ ಸಮನ್ಸ್ ತಡೆ ನೀಡಬೇಕು ಎಂದು ಕೋರಿದರು.

- Advertisement - 

ಅರ್ಜಿದಾರ ಪರ ವಕೀಲರ ವಾದಕ್ಕೆ ಆಕ್ಷೇಪಿಸಿದ ಇಡಿ ಪರ ವಕೀಲರು, ಅರ್ಜಿದಾರರು ವಕೀಲರಾಗಿರುವ ಕಾರಣಕ್ಕೆ ಇ.ಡಿ ಸಮನ್ಸ್ ಜಾರಿಗೊಳಿಸಿಲ್ಲ. ಬದಲಿಗೆ ಕೆ.ಸಿ. ವೀರೇಂದ್ರ ಅವರ ಕಂಪನಿ ಸೇರಿದಂತೆ ಹಲವು ವಾಣಿಜ್ಯ ಕಂಪನಿಗಳಲ್ಲಿ ಪಾಲುದಾರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರ ಮೇಲೆ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಗಂಭೀರ ಆರೋಪವಿದೆ. ಇದರ ಅನ್ವಯ ಸಮನ್ಸ್ ಜಾರಿಗೊಳಿಸಿಲಾಗಿದೆ ಎಂದು ಪೀಠದ ಮುಂದೆ ವಿವರಿಸಿದರು.

ಅಲ್ಲದೆ, ಯಾವುದೇ ವ್ಯಕ್ತಿಯ ವಿರುದ್ಧ ಈ ರೀತಿಯ ಆರೋಪ ಕೇಳಿ ಬಂದಾಗ ಸಮನ್ಸ್ ಜಾರಿಗೊಳಿಸುವುದು ಕಾನೂನು ಬದ್ಧ ಪ್ರಕ್ರಿಯೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುವುದು ಒಪ್ಪುವಂತದಲ್ಲ. ಇಲ್ಲಿ ಅರ್ಜಿದಾರರು ತನಿಖಾಧಿಕಾರಿಗಳ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಈ ಎಲ್ಲ ಅಂಶವನ್ನು ಪರಿಗಣಿಸಿ ಅರ್ಜಿ ವಜಾಗೊಳಿಸುವಂತೆ ಇಡಿ ಪರ ವಕೀಲರು ನ್ಯಾಯ ಪೀಠಕ್ಕೆ ಮನವಿ ಮಾಡಿದರು.

- Advertisement - 

ಈ ವೇಳೆ ಪೀಠವು, ಅರ್ಜಿದಾರರ ವಿರುದ್ಧ ನಾನಾ ರೀತಿಯಲ್ಲಿ ಆರೋಪ ಮಾಡಿದ್ದೀರಿ? ಅದನ್ನು ಸಾಬೀತುಪಡಿಸಲು ಪೂರಕ ದಾಖಲೆ ಬೇಕಲ್ಲವೇ? ದಾಖಲೆ ಎಲ್ಲಿ? ಹೂಡಿಕೆ ಮಾಡಿರುವ ಹಾಗೂ ಪಾಲುದಾರಾಗಿದ್ದಾರೆ ಎಂಬ ಸಂಗತಿ ಸತ್ಯವೆಂದು ಒಪ್ಪಿಕೊಳ್ಳಲು ದಾಖಲೆ ಬೇಕಲ್ಲವೇ? ಆಕ್ಷೇಪಣೆಗೆ ಪೂರಕಾವಾಗಿರವ ದಾಖಲೆ ಒದಗಿಸಿಲ್ಲ ಏಕೆ ಎಂದು ಪ್ರಶ್ನಿಸಿತ್ತು. ಇದಕ್ಕೆ ಇ.ಡಿ. ಪರ ವಕೀಲರು ದಾಖಲೆ ಸಲ್ಲಿಸುವುದಾಗಿ ಪೀಠಕ್ಕೆ ತಿಳಿಸಿದರು.

ಇ.ಡಿ ಪರ ವಕೀಲರ ವಾದಕ್ಕೆ ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಇ.ಡಿ ಪರ ವಕೀಲರ ವಾದದಲ್ಲಿ ಹುರುಳಿಲ್ಲ. ಪೀಠ ಈ ವಾದ ಒಪ್ಪಿಕೊಂಡರೆ ಅರ್ಜಿದಾರರ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಒದಗಿಸುವ ಸಂವಿಧಾನದ 21ನೇ ವಿಧಿ ಉಲ್ಲಂಸಿದಂತಾಗುತ್ತದೆ. ನಮ್ಮ ಕಕ್ಷಿದಾರರಿಗೂ ಕಂಪನಿಗೂ ಯಾವುದೇ ಸಂಬಂಧವಿಲ್ಲ. ವಕೀಲನಾಗಿ ಅವರು ಶಾಸಕ ವೀರೇಂದ್ರ ಪಪ್ಪಿಗೆ ಸಲಹೆ ನೀಡಿದ್ದಾರೆಷ್ಟೇ. ಈ ಹೇಳಿಕೆಗೆ ಬದ್ಧರಾಗಿರುವುದಾಗಿ ಹೇಳಿದರು.

ಸುದೀರ್ಘ ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದ್ದು, ಬರುವ ಸೋಮವಾರ ಪ್ರಕಟಿಸುವುದಾಗಿ ಹೇಳಿ ಪ್ರಕರಣವನ್ನು ಮುಂದೂಡಿತು.

 

 

 

Share This Article
error: Content is protected !!
";