ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಶುಸಂಗೋಪನೆ ಇಲಾಖೆಯಿಂದ ಯಾವ ಶಾಸಕರನ್ನೂ ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿಲ್ಲ ಎಂದು ಸಚಿವ ಕೆ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 25ಕ್ಕೂ ಅಧಿಕ ಶಾಸಕರು ಹೈನುಗಾರಿಕೆ ಅಧ್ಯಯನ ಸಂಬಂಧ ವಿದೇಶ ಪ್ರವಾಸ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಇಲಾಖೆ ಹೆಸರು ಏಕೆ ಬಂತೋ ಗೊತ್ತಿಲ್ಲ. ನಮ್ಮ ಇಲಾಖೆ ಕಡೆಯಿಂದ ಯಾರನ್ನೂ ಕಳಿಸುತ್ತಿಲ್ಲ. ಇಂಥ ಚರ್ಚೆ ಯಾಕೆ ಬಂತು ಅಂತಲೇ ಗೊತ್ತಾಗುತ್ತಿಲ್ಲ ಎಂದರು.
ಅಧಿವೇಶನದ ಸಂದರ್ಭದಲ್ಲಿ ವಿದೇಶ ಪ್ರವಾಸದ ಚರ್ಚೆ ಆಯ್ತು. ನೀವೂ ಬನ್ನಿ, ನೀವೂ ಬನ್ನಿ ಎಂದು ಕೆಲ ಸ್ನೇಹಿತರು ಹೇಳಿದರು. ಆಯ್ತು ನೋಡೋಣ ಎಂದೆ. ಅದರ ನಂತರ ಇಲಾಖೆಯಿಂದ ಕಳಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಕೆಲ ಸ್ನೇಹಿತರು ಅವರವರ ಖರ್ಚಿನಲ್ಲಿ ಹೋಗ್ತಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಬೇಕು. ಅವರ ಖರ್ಚಿನಲ್ಲಿ ಫಾರಿನ್ ಹೋಗೋದಕ್ಕೆ ಯಾಕೆ ಭಯ ಪಡ್ತಿದ್ದಾರೆ ಗೊತ್ತಿಲ್ಲ ಎಂದು ಸಚಿವ ವೆಂಕಟೇಶ್ ಹೇಳಿದರು.
ವಿದೇಶ ಪ್ರವಾಸಕ್ಕೆ ಕಳಿಸುವಷ್ಟು ದುಡ್ಡು ನಮ್ಮ ಇಲಾಖೆಯಲ್ಲಿ ಇಲ್ಲ. ಅವರ ದುಡ್ಡಲ್ಲೇ ಪ್ರವಾಸಕ್ಕೆ ಹೋಗೋದಕ್ಕೆ ಏಕೆ ಭಯ?. ಡಿ.ಕೆ.ಶಿವಕುಮಾರ್ ಬಣ, ಸಿಎಂ ಬಣ ಎಂಬುದನ್ನು ಯಾಕೆ ಚರ್ಚೆ ಮಾಡಬೇಕು. ನಾಯಕತ್ವ ವಿಚಾರಕ್ಕೂ ಇದಕ್ಕೂ ಏನು ಸಂಬಂಧ?. ಕೆಲವರು ಅನುಮತಿ ಕೋರಿ ಪತ್ರ ಬರೆದಿದ್ದು ಹೌದು. ಸ್ನೇಹಿತರ ವಲಯದಲ್ಲಿ ಚರ್ಚೆ ಆಗಿದ್ದು ನಿಜ. ಆದರೆ ನಾವು ಇಲಾಖೆಯಿಂದ ಕಳಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ತಿಳಿಸಿದರು.
ಎನ್ಒಸಿಗೆ ಪತ್ರ ಬರೆದಿದ್ದಾಗ ನನ್ನ ಹೆಸರೂ ಇತ್ತು. ಆದರೆ ನಾನು ವಿದೇಶಕ್ಕೆ ಹೋಗುತ್ತಿಲ್ಲ. ಸಿಎಂಜೊತೆಗೆ ನಾನು 30 ವರ್ಷದಿಂದ ಇದ್ದೇನೆ. ಅವರೊಂದಿಗೆ ಇರುವ ಒಡನಾಟವನ್ನು ಹೀಗೆ ಪ್ರಶ್ನೆ ಮಾಡಿದರೆ, ವ್ಯಾಖ್ಯಾನ ಮಾಡಿದರೆ ಏನು ಹೇಳಲಿ?. ದೆಹಲಿಯಿಂದ ನನಗೇನೂ ಈ ಬಗ್ಗೆ ವರದಿ ಕೇಳಿಲ್ಲ, ಮಾಹಿತಿಯನ್ನು ಕೇಳಿಲ್ಲ ಎಂದು ಸಚಿವರು ತಿಳಿಸಿದರು.
ಶಾಸಕರ ವಿದೇಶ ಪ್ರವಾಸ?
ಸಿಎಂ ಸಿದ್ದರಾಮಯ್ಯ ಆಪ್ತ ಪಶುಸಂಗೋಪನೆ ಇಲಾಖೆ ಸಚಿವ ಕೆ. ವೆಂಕಟೇಶ್ ನೇತೃತ್ವದಲ್ಲಿ ಕಾಂಗ್ರೆಸ್ನ 20ಕ್ಕೂ ಹೆಚ್ಚು ಶಾಸಕರು ಶಿವರಾತ್ರಿ ಬಳಿಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾತು ಬಲವಾಗಿ ಹರಿದಾಡುತ್ತಿತ್ತು. ಜಾನುವಾರು ಸಾಕಾಣಿಕೆ ಹಾಗೂ ಹೈನುಗಾರಿಕೆ ಸಂಬಂಧ ಅಧ್ಯಯನ ನಡೆಸಲು ಎರಡು ವಾರಗಳ ಕಾಲ ಶಾಸಕರು ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು.
ಅಧಿವೇಶನದ ವೇಳೆ ವಿದೇಶಿ ಪ್ರವಾಸದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಸಂಬಂಧ ಅನುಮತಿ ಕೋರಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿಗೆ ಪತ್ರ ಬರೆಯಲಾಗಿತ್ತು. ಕೆಲ ಶಾಸಕರಿಗೆ ನಿರಾಕ್ಷೇಪಣಾ ಪತ್ರನೂ ನೀಡಲಾಗಿತ್ತು. ಪವರ್ ಫೈಟ್ ಮಧ್ಯೆ ಈ ವಿದೇಶ ಪ್ರವಾಸ ಮತ್ತೆ ಬಣ ರಾಜಕೀಯದ ಚರ್ಚೆಗೆ ಹೊಸ ಆಯಾಮ ನೀಡಿತ್ತು.

