ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದಲ್ಲಿ ಆಂಜನೇಯ ಬಹುದೊಡ್ಡ ಶಕ್ತಿ. ಅವರಿಗೆ ನಾವೆಲ್ಲರೂ ರಾಜಕೀಯ ಶಕ್ತಿ ತುಂಬುವ ಅಗತ್ಯ ಇದೆ. ಮಾದಿಗ ಸಮುದಾಯದ ಅಗ್ರಗಣ್ಯ ನಾಯಕ, ಮಾದಿಗರ ಒಡೆಯ, ಮಾದಿಗ ಸಮುದಾಯದ ಅಸ್ಮಿತೆ ಆಗಿರುವ ಆಂಜನೇಯ, ಎಲ್ಲ ವರ್ಗದ ಜನರ ಪ್ರೀತಿಗಳಿಸಿರುವ ಜನ ನಾಯಕ.
ಆದರೆ, ಅವರನ್ನು ನಾವು ಗೆಲ್ಲಿಸಿಕೊಂಡು, ಕ್ಷೇತ್ರವನ್ನು ಮಾದರಿಯನ್ನಾಗಿಸಿಕೊಳ್ಳುವಲ್ಲಿ ನಾವು ಸೋತಿದ್ದು ನಮ್ಮ ದೌಭಾಗ್ಯ ಎಂದು ಜಿಪಂ ಮಾಜಿ ಸದಸ್ಯ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ ತಿಳಿಸಿದರು.
ಕ್ಷೇತ್ರದಲ್ಲಿನ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ತುಂಬಿಸುವ ಮಹತ್ವದ ಯೋಜನೆ ಜಾರಿಗೊಳಿಸಿದ ಆಂಜನೇಯ ಈಗಲೂ ಅಧಿಕಾರಲ್ಲಿದ್ದಿದ್ದರೇ ಅರೆಮಲೇನಾಡು ಸಂಪೂರ್ಣ ಮಲೆನಾಡಾಗಿರುತ್ತಿತ್ತು. ಸೋಲಿನ ಕಹಿ ಮರೆತು ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಈಗಲು ಶ್ರಮಿಸುತ್ತಿದ್ದಾರೆ. ಈಚೆಗೆ ಗಂಗಸಮುದ್ರಕ್ಕೆ ಭೇಟಿ ನೀಡಿ ರೈತರ ಮನವೊಲಿಸಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಡಿಸೆಂಬರ್ ಅಂತ್ಯದೊಳಗೆ ಭದ್ರೆ ತಾಲ್ಲೂಕನ್ನು ಪ್ರವೇಶಿಸಿದ್ದಾಳೆ. ಈ ಮೂಲಕ ಆಂಜನೇಯ ಭದ್ರೆಯ ಹರಿಕಾರ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಗಣ್ಯರು ಹೇಳಿದರು.
ಸೋತಿದ್ದು ನಾವು ಕ್ಷೇತ್ರದ ಜನರೊಂದಿಗೆ ಸದಾ ಸಂಪರ್ಕ ಹೊಂದಿರುವ ಹೆಚ್.ಆಂಜನೇಯ ಅವರು ಮಾದಿಗ ಸಮುದಾಯದ ಏಳ್ಗಿಗೆ ಹೋರಾಟ ನಡೆಸಿದ್ದರೂ ಎಲ್ಲ ಜಾತಿ-ಧರ್ಮದವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಆರ್.ಕೃಷ್ಣಮೂರ್ತಿ ಹೇಳಿದರು.
ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ಅದರಲ್ಲೂ ಹೊಳಲ್ಕೆರೆ ಕ್ಷೇತ್ರದಲ್ಲಿ ಕೊಳವೆಬಾವಿ ಸೇರಿ ಅನೇಕ ಸೌಲಭ್ಯಗಳನ್ನು ಎಲ್ಲ ಜಾತಿಯವರಿಗೆ ನೀಡಿದರು. ಈಗ ಅಡಕೆ ಬೆಳೆದು ಬದುಕುಕಟ್ಟಿಕೊಂಡಿದ್ದಾರೆ. ಇಷ್ಟೆಲ್ಲ ಅನುಕೂಲ ಕಲ್ಪಿಸಿದ ಅವರನ್ನು ನಾವು ಗೆಲ್ಲಿಸಿಕೊಳ್ಳುವಲ್ಲಿ ಸೋತಿದ್ದು, ಅವರಗಿಂತಲೂ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ ಎಂದು ತಿಳಿಸಿದರು.
ನಾವು ಕೇಳದೇ ಇದ್ದರೂ ಭದ್ರಾ ಮೇಲ್ದಂಡೆ ಯೋಜನೆಗೆ ಹೊಳಲ್ಕೆರೆ ಸೇರ್ಪಡೆ ಮಾಡಿದ್ದ ಅವರು, ಈ ಬಾರಿ ಗೆದ್ದಿದ್ದರೇ ಇಡೀ ಹೊಳಲ್ಕೆರೆ ಕ್ಷೇತ್ರವನ್ನೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಗೊಳಿಸುತ್ತಿದ್ದರು. ಆದರೆ, ಅವರು ಸೋಲುಂಡಿದ್ದು ನಮಗೆ ಬಹುದೊಡ್ಡ ನಷ್ಟ ಎಂದು ತಿಳಿಸಿದರು.

ಶಾಸಕ, ಮಂತ್ರಿಯಾಗಿದ್ದ ಆಂಜನೇಯ ಅವರು ಸದಾ ಜನರೊಂದಿಗೆ ಇರುವ ವ್ಯಕ್ತಿ. ಆದರೆ, ಅವರನ್ನು ನಾವು ಗೆಲ್ಲಿಸುವ ಜವಾಬ್ದಾರಿ ನಿರ್ವಹಿಸುವಲ್ಲಿ ಸೋತಿದ್ದೇವೆ. ಪರಿಣಾಮ ಕ್ಷೇತ್ರಕ್ಕೆ ಪ್ರಭಾವಿ ಖಾತೆ ಮಂತ್ರಿ ಕೈತಪ್ಪಿದೆ. ಈಗ ಅನುದಾನ, ಅಭಿವೃದ್ಧಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸಿದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ ಆಂಜನೇಯ ಎಲ್ಲ ವರ್ಗದ ಹಿತ ಬಯಸುವ ಅಪರೂಪದ ನಾಯಕ. ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ಆದರೆ, ಅವರಿಗೆ ಹೆಚ್ಚು ಹೊಳಲ್ಕೆರೆ ಕ್ಷೇತ್ರದ ಜನರ ಮೇಲೆ ಅದಮ್ಯ ಪ್ರೀತಿ. ಈ ಕಾರಣಕ್ಕೆ ಸೋತರೂ ಕ್ಷೇತ್ರದ ಜನರ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಅವರು ನಮ್ಮೆಲ್ಲರ ಪಾಲಿಗೆ ಬಹುದೊಡ್ಡ ಶಕ್ತಿ ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಸ್‍ಎಂಎಲ್ ತಿಪ್ಪೇಸ್ವಾಮಿ ಪೌರಕಾರ್ಮಿಕ ಸಂಘಟನೆ, ಮಾದಿಗ ಒಳಮೀಸಲಾತಿ ವಿಷಯದಲ್ಲಿ 35 ವರ್ಷಗಳಿಂದಲೂ
ಹೋರಾಟ ನಡೆಸಿಕೊಂಡು ಬಂದಿರುವ ಆಂಜನೇಯ, ರಾಜಕಾರಣಿ ಆಗಿದ್ದರೂ ಮೊದಲು ಜನ, ಬಳಿಕ ಅಧಿಕಾರವೆಂಬ ಮನೋಭಾವ ಹೊಂದಿದವರು. ಅವರಿಗೆ ನಾವೆಲ್ಲರೂವರಾಜಕೀಯ ಶಕ್ತಿ ತುಂಬಬೇಕಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹೆಚ್.ಆಂಜನೇಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಸತತ 35 ವರ್ಷಗಳ ಕಾಲ ನನ್ನ ಜನ, ನನ್ನ ಸಮುದಾಯ, ಅನೇಕ ಸಂಘಟನೆಗಳ ಹೋರಾಟದ ಫಲ ಒಳಮೀಸಲಾತಿ ಲಭಿಸಿದೆ. ಸಿದ್ದರಾಮಯ್ಯ ಅವರಿಲ್ಲದಿದ್ದರೇ ಒಳಮೀಸಲಾತಿ ಜಾರಿ ಅಸಾಧ್ಯವಾಗಿತ್ತು. ಒಳಮೀಸಲಾತಿ ಜಾರಿಗೊಳಿಸುವಲ್ಲಿ ಅವರ ಪಾತ್ರ ಹಿರಿದು ಎಂದು ಹೇಳಿದರು.
ನಮ್ಮ ಚಳವಳಿಗೆ ಹಿಂದುಳಿದ, ಮೇಲ್ವರ್ಗ ಸೇರಿ ಎಲ್ಲ ವರ್ಗದ ಜನರು ಬೆಂಬಲವಾಗಿ ನಿಂತಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸಿವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೈಕಮಾಂಡ್, ಸಿದ್ದರಾಮಯ್ಯ ಸೇರಿ ಎಲ್ಲರೂ ಸ್ಪರ್ಧೆ ಮಾಡಬೇಡ. ರಾಜ್ಯ ಸುತ್ತಾಡು, ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಎಂಎಲ್ಸಿ ಮಾಡಿಕೊಂಡು ಮಂತ್ರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ, ನನಗೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವುದು ಇಷ್ಟಪಡಲಿಲ್ಲ. ಜೊತೆಗೆ ಕ್ಷೇತ್ರದ ಜನರ ಬಗ್ಗೆ ವಿಶ್ವಾಸ ಇತ್ತು. ಆದರೆ, ವರಿಷ್ಠರು ಮುನ್ಸೂಚನೆ ಕೊಟ್ಟಂತೆ ಷಡ್ಯಂತರದಿಂದ ಸೋಲುಂಡೆ. ಆದರೆ, ಜನರ
ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದ್ದೇನೆ. ಅದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ ಎಂದು ಭಾವುಕರಾದರು. ಚುನಾವಣೆಯಲ್ಲಿ ಗೆದ್ದಿದ್ದರೇ ಮಂತ್ರಿಯಾಗಿ ಕ್ಷೇತ್ರ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬಹದಿತ್ತು. ಆದರೆ, ಸೋಲನ್ನೇ ಮಾದಿಗ
ಸಮುದಾಯದ ಏಳ್ಗಿಗೆ ಮೀಸಲಿಟ್ಟು ರಾಜ್ಯಾದ್ಯಂತ ಓಡಾಡಿದೆ. ಜನರ ಕೂಡ ನನ್ನ ನಡೆಗೆ ಬೆಂಬಲವಾಗಿ ನಿಂತರು ಎಂದರು. ಸಚಿವ ಸಂಪುಟದಲ್ಲಿ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ ಅವರು ಬೆಂಬಲವಾಗಿ ನಿಂತು ಶ್ರಮಿಸಿದ್ದಾರೆ ಎಂದರು.
ಒಳಮೀಸಲಾತಿ ಜಾರಿಗೊಂಡಿದ್ದು, ಶಿಕ್ಷಣ, ಉದ್ಯೋಗದಲ್ಲಿ ಅನುಷ್ಠಾನಕ್ಕೆ ಬಂದಿದೆ. ಉದ್ಯೋಗ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಮಾದಿಗ ಸಮುದಾಯದವರು ಸೋಮಾರಿಗಳಾಗದೆ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು. ಜೊತೆಗೆ ಉದ್ಯೋಗ ಸೇರಿ ವಿವಿಧ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬರುವಂತೆ ಶ್ರಮಿಸಬೇಕೆಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಶಿವಪುರ ಶಿವಕುಮಾರ್, ಮಾಜಿ ಸದಸ್ಯ ಆರ್.ನರಸಿಂಹರಾಜು, ಮುಖಂಡ ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಅಳಗವಾಡಿ ಪ್ರಕಾಶ್, ಗ್ಯಾರೆಂಟಿ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ, ವರ್ತಕ ಮಹಾಂತೇಶ್, ಮುಖಂಡರಾದ ಚೌಲಿಹಳ್ಳಿ
ನಾಗೇಂದ್ರಪ್ಪ, ದಾದಾಪೀರ್, ನಿರಂಜನ್, ದುಗೇಶ್ ಪೂಜಾರ್, ರಂಗೇನಹಳ್ಳಿ ಹನುಮಂತಪ್ಪ, ಹೆಗ್ಗೆರೆ ವಸಂತ, ಮುಬಾರಕ್, ಚಿಕ್ಕಬೆನ್ನೂರು ವಿಜಯಕುಮಾರ್, ಕಲ್ಯಾಣ ಮಂಟಪ ನೀಡಿದ ಮಾಲೀಕ ನಿರಂಜನ, ಊಟದ ವ್ಯವಸ್ಥೆ ನಿರ್ವಹಿಸಿದ ಕಾಂಗ್ರೆಸ್ ಕಿಸಾನ್ ಘಟಕದ ಮುಖ್ಯಸ್ಥ ಶಿವಲಿಂಗಪ್ಪ ಸೇರಿದಂತೆ ಲಿಂಗಾಯತ, ಯಾದವ, ಕುರುಬ, ಮುಸ್ಲಿಂ, ಕುಂಚಿಟಿಗರು ಸೇರಿ ವಿವಿಧ ಜಾತಿಯ ಮುಖಂಡರು, ಜನರು ಪಾಲ್ಗೊಂಡಿದ್ದರು.

