ಮಾದಿಗರ ತಟ್ಟೆಗೆ ಕೈ ಹಾಕದಂತೆ ಕಾನೂನು ರೂಪಿಸಲು ಕೇಂದ್ರ ಮಧ್ಯ ಪ್ರವೇಶಿಸಲಿ;ಆಂಜನೇಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಳಮೀಸಲಾತಿ ಜಾರಿ ಬಳಿಕವೂ ಕೆಲ ಗೊಂದಲಗಳು ಇದ್ದು
, ಅವುಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿಗೊಳಿಸಿ, ಕಾಯ್ದೆ ರೂಪಿಸಲು ಮುಂದಾಗಿರುವುದು ಸ್ವಾಗತರ್ಹ ಆದರೆ, ಬಡ್ತಿ, ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆಗೂ ಅನ್ವಯಿಸುವ ರೀತಿ ನೀತಿ ರೂಪಿಸಬೇಕೆಂದು ಆಗ್ರಹಿಸಿದರು.

- Advertisement - 

ಎ ಗುಂಪಿನಲ್ಲಿರುವ ಮಾದಿಗರು ಪೈಪೋಟಿ ನೀಡುವಲ್ಲಿ ದುರ್ಬಲರೆಂಬ ಕಾರಣಕ್ಕೆ ತಮಿಳುನಾಡಿನಿಂದ ವಲಸೆ ಬಂದ ಪರಿಯಾ ಹಾಗೂ ಎಕೆ, ಎಡಿಯಲ್ಲಿರುವ ಮೂಲ ಜಾತಿ ಮಾದಿಗರಲ್ಲದವರು ಕೂಡ ಎ ವರ್ಗಕ್ಕೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವೆಡೆ ಈ ಕೃತ್ಯ ಈಗಾಗಲೇ ಆಗಿದೆ ಎಂಬ ಆರೋಪ ಇದೆ. ಇದಕ್ಕೆ ಶಾಶ್ವತ ತಡೆ ಹಾಕಲು ಕಠಿಣ ಕಾನೂನು ರೂಪಿಸಬೇಕೆಂದು ಹೇಳಿದರು. ಒಳಮೀಸಲಾತಿಯಲ್ಲಿ ಎ, ಬಿ, ಸಿ ಗುಂಪುಗಳನ್ನಾಗಿಸಿದ್ದು, ಶಿಕ್ಷಣ, ಉದ್ಯೋಗ ವಿಷಯದಲ್ಲಿ ಪ್ರಥಮ ಆದ್ಯತೆ ಎ ವರ್ಗಕ್ಕೆ ನೀಡಬೇಕು. ಆದರೆ, ಎಂಡಿ, ಎಂಎಸ್ ಸೀಟು ಹಂಚಿಕೆ ವೇಳೆ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಎ ಗುಂಪನ್ನು ಕೈಬಿಟ್ಟು ಬಿ, ಸಿ ಗುಂಪಿಗೆ ಮನ್ನಣೆ ನೀಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ಈ ಕುರಿತು ತನಿಖೆ ನಡೆಸಿ ನ್ಯಾಯ ಒದಗಿಸುವ ಜೊತೆಗೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ತಿಳಿಸಿದರು.

ಶೇ.50ರಷ್ಟು ಮೀಸಲಾತಿ ಹೆಚ್ಚಳಕ್ಕೆ ಅವಕಾಶ ಇಲ್ಲ. ಆದರೆ, ಕಳೆದ ಬಿಜೆಪಿ ಸರ್ಕಾರ ಎಸ್ಸಿ ಶೇ.2, ಎಸ್ಟಿಗೆ ಶೇ.4ರಷ್ಟು ಹೆಚ್ಚಳ ಮಾಡಿ ಆದೇಶಿಸಿತ್ತು. ಅದಕ್ಕೆ ಕಾನೂನು ಮುದ್ರೆ ನೀಡಿರಲಿಲ್ಲ. ಆದರೆ, ಈಗ ಈ ಕುರಿತು ಆಕ್ಷೇಪ ವ್ಯಕ್ತವಾಗಿ ಕೋರ್ಟ್ ಮೆಟ್ಟಿಲು ಏರಲಾಗಿದೆ. ಪರಿಣಾಮ ಉದ್ಯೋಗ ನೇಮಕಾತಿ ಪ್ರಕ್ರಿಯೆ ವಿಳಂಬ ಆಗುತ್ತಿದೆ. ನಿರುದ್ಯೋಗ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

- Advertisement - 

ಕೆಲ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವ ಸಂಪೂರ್ಣ ಮಾಹಿತಿ ಪಡೆದು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಳ್ಳಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಜ್ಯದ ವಿಷಯದಲ್ಲಿ ಮಧ್ಯಪ್ರವೇಶಿಸಿ ಕಾನೂನು ರೂಪಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.

ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಜಾತಿ ಗುರುತಿಸಿಕೊಳ್ಳದ ಎಕೆ, ಎಡಿ ಗುಂಪನ್ನು ಪ್ರತ್ಯೇಕಗೊಳಿಸಿತ್ತು. ಆದರೆ, ರಾಜ್ಯ ಸರ್ಕಾರ ಅದನ್ನು ರದ್ದುಗೊಳಿಸಿ ಆ ಮೀಸಲಾತಿಯನ್ನು ಬಿ ಗುಂಪಿಗೆ ವರ್ಗಾಯಿಸಿತು. ಜೊತೆಗೆ ಎಕೆ, ಎಡಿ ಅವರು ಮೂಲ ಜಾತಿ ಪ್ರಕಾರ ಎ ಅಥವಾ ಬಿ ವರ್ಗಕ್ಕೆ ಸೇರಿಕೊಳ್ಳುವಂತೆ ಆದೇಶಿಸಿತ್ತು. ಈಗ ಇದನ್ನು ಕೆಲ ಪಟ್ಟಭದ್ರರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮಾದಿಗರು ದುರ್ಬಲರೆಂಬ ಕಾರಣಕ್ಕೆ ಎ ಗುಂಪಿಗೆ ಸುಳ್ಳು ಜಾತಿ ಹೇಳುವ ಮೂಲಕ ಬರುತ್ತಿದ್ದಾರೆ ಎಂದು ದೂರಿದರು.

ಎಕೆ, ಎಡಿ ಅವರಿಗೆ ಜಾತಿ ಪ್ರಮಾಣ ಕಲ್ಪಿಸುವ ವೇಳೆ ಅವರ ಪೂರ್ವಾಶ್ರಮದ ವಂಶವೃಕ್ತ ಪರಿಶೀಲಿಸಬೇಕು. ಒಂದೊಮ್ಮೆ ಸುಳ್ಳು ಹೇಳಿ ಪ್ರಮಾಣ ಪತ್ರ ಪಡೆದಿದ್ದರೇ ಅಂತಹರನ್ನು ಗುರುತಿಸಿ ಶಿಕ್ಷೆಗೆ ಗುರುಪಡಿಸಬೇಕೆಂದು ಆಗ್ರಹಿಸಿದರು.

ಈ ಸಮಸ್ಯೆ ಪರಿಹಾರಕ್ಕೆ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಧ್ಯಪ್ರವೇಶಿಸಬೇಕು. ಸುಳ್ಳು ಜಾತಿ, ಮೀಸಲಾತಿ ಹೆಚ್ಚಳಕ್ಕೆ ಇರುವ ಅಡ್ಡಿ, ಕೋರ್ಟ್ ಅಂಗಳದಲ್ಲಿರುವ ಅಲೆಮಾರಿಗಳ ತಕಾರರು ಅರ್ಜಿ ಎಲ್ಲವನ್ನೂ ಬಗೆಹರಿಸಬೇಕು. ಈ ಮೂಲಕ ಒಳಮೀಸಲಾತಿ ಹಂಚಿಕೆ ಮಾಡಿರುವ ಹೆಗ್ಗಳಿಕೆ ಜೊತೆಗೆ ಸಮಸ್ಯೆ ಪರಿಹರಿಸಿದ ಕೀರ್ತಿ ತಮ್ಮದಾಗಿಸಿಕೊಳ್ಳಬೇಕೆಂದು ಕೋರಿದರು.

ಮಾದಿಗ ಸಮುದಾಯ 35 ವರ್ಷಗಳ ಕಾಲ ಹೋರಾಟದ ಹಾದಿಯಲ್ಲಿ ಕಣ್ಣೀರು ಸುರಿಸಿ ಒಳಮೀಸಲಾತಿ ಜಾರಿಗೆ ಶ್ರಮಿಸಿದೆ. ಕೋರ್ಟ್, ಎಲ್ಲ ಸರ್ಕಾರಗಳು ನಮ್ಮ ಕುರಿತು ಪ್ರೀತಿ ತೋರಿವೆ. ಅದೇ ರೀತಿ ಈಗ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ಒಗ್ಗೂಡಿ ಶ್ರಮಿಸಬೇಕು ಎಂದರು.

ಜೇನುಗೂಡಿಗೆ ಕೈ
ಮೀಸಲಾತಿ ಎಂಬುದು ಜೇನುಗೂಡಿಗೆ ಕೈ ಹಾಕಿದಂತೆ ಆಗಿರುವುದು ಸತ್ಯ. ಆದರೆ, ಈ ವಿಷಯದಲ್ಲಿ ಜೇನುಗೂಡಿಗೆ ಕೈ ಹಾಕಿ ಸಿಹಿಯನ್ನು ನೊಂದ, ಬಡ ವರ್ಗದ ಜನರಿಗೆ ಹಂಚುವ ಕಾರ್ಯವನ್ನು ಸಮರ್ಥವಾಗಿ ಸಿದ್ದರಾಮಯ್ಯ ಮಾಡಿದ್ದಾರೆ. ಇಂತಹ ನಡೆಯನ್ನೇ ಸಾಮಾಜಿಕ ನ್ಯಾಯ ಎನ್ನುವುದು”.
ಹೆಚ್.ಆಂಜನೇಯ, ಮಾಜಿ ಸಚಿವರು. 

ಪತ್ರಿಕಾಗೋಷ್ಠಿಯಲ್ಲಿ ಚಿತ್ರಕಲಾ ಅಕಾಡೆಮಿ ಸದಸ್ಯ ಸಿ.ಕಣ್ಮೇಶ್, ತಾಲ್ಲೂಕು ಕೆಡಿಪಿ ನಾಮನಿರ್ದೇಶಿತ ಸದಸ್ಯ ಕಿರಣ್, ವಕೀಲರಾದ ಶರಣಪ್ಪ, ರವೀಂದ್ರ, ಮುಖಂಡರಾದ ಸಿ.ಎನ್.ಕುಮಾರ್, ಪ್ರಸನ್ನ, ವಿಜಯಕುಮಾರ್ ಇತರರಿದ್ದರು.

 

Share This Article
error: Content is protected !!
";