ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ದೇವನಹಳ್ಳಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಹೊರಾಟಗಾರರ ಮೇಲೆ ನೆಡದ ಪೊಲೀಸ್ ದೌರ್ಜನ್ಯ ಖಂಡಿಸಿ ಚಿತ್ರದುರ್ಗ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ರೈತರು ಪ್ರತಿಭಟನೆ ನಡೆಸಿದ್ದಾರೆ.
ದೇವನಹಳ್ಳಿಯಲ್ಲಿ ಅತ್ಯಂತ ಶಾಂತಿಯುತವಾಗಿ ನಡೆದಿದ್ದ ರೈತರ ಪ್ರತಿಭಟನೆಯನ್ನ ಪೊಲೀಸ್ ಬಲ ಬಳಸಿ ಹೋರಾಟವನ್ನ ಹತ್ತಿಕ್ಕುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ನಡೆಸಿದೆ ಎಂದು ರೈತರು ಆರೋಪಿಸಿದರು. ವಯಸ್ಸಾದ ಮಹಿಳೆರನ್ನು ಬಿಡದೆ ಎಲ್ಲಾ ಹೋರಾಟಗಾರರನ್ನು ಸಿಕ್ಕಾಪಟ್ಟಿ ಎಳೆದಾಡಿ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಅಭಿವೃದ್ಧಿ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಲಾಭ ಮಾಡಿಕೊಡಲು ಅಸಂಖ್ಯಾತ ರೈತ ಸಮುದಾಯವನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ರೈತರು ಕಿಡಿಕಾರಿದರು.
ದೇವನಹಳ್ಳಿ ಚನ್ನರಾಯಪಟ್ಟಣ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು, ಬಂಧಿತ ರೈತರನ್ನು ಬಿಡುಗಡೆ ಮಾಡಬೇಕು, ಹೊರಾಟಗಾರರೊಂದಿಗೆ ಹೀನಾಯವಾಗಿ ವರ್ತಿಸಿದ ಡಿವೈಎಸ್ಪಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಹೋರಾಟಗಾರರು ಆಗ್ರಹಿಸಿದ್ದಾರೆ.