ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಮುಖ್ಯಮಂತ್ರಿ ಹುದ್ದೆ ಬದಲಾವಣೆಗೆ ಎದ್ದಿದ್ದ ಬಿರುಗಾಳಿ ತಹಬದಿಗೆ ಬರಲು ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಬೇಕಾಯಿತು.
ರಾಜ್ಯ ಕಾಂಗ್ರೆಸ್ ಸರ್ಕಾರದನಲ್ಲಿ ಬಣ ರಾಜಕೀಯ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕವೂ ಮುಂದುವರೆದಿದೆ.
ಮಂಗಳೂರಿನಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲೇ ಸಿದ್ದರಾಮಯ್ಯ ಪರ ಒಂದು ಬಣ, ಡಿ.ಕೆ. ಶಿವಕುಮಾರ್ ಪರ ಮತ್ತೊಂದು ಬಣ ಜಿದ್ದಿಗೆ ಬಿದ್ದು ಜೈಕಾರ ಹಾಕುತ್ತಾ ಶಕ್ತಿ ಪ್ರದರ್ಶನ ಮಾಡಿದ ಪ್ರಸಂಗ ನಡೆದಿದೆ.
ಮಂಗಳೂರಿನ ಕೊಣಾಜೆಯಲ್ಲಿ ಆಯೋಜಿಸಲಾಗಿದ್ದ ನಾರಾಯಣ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ಭಾಗಿಯಾಗಲು ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲೇ ಎರಡು ಬಣಗಳ ಮುಖಂಡರು, ಕಾರ್ಯಕರ್ತರು ಜೈಕಾರ ಹಾಕಿ ಗಮನ ಸೆಳೆದಿದ್ದಾರೆ. ಈ ವೇಳೆ ವೇಣುಗೋಪಾಲ್ ಸಮ್ಮುಖದಲ್ಲೇ ಪಕ್ಷದಲ್ಲಿನ ಒಳ ರಾಜಕೀಯ ಬಯಲಾಗಿದೆ. ಏರ್ಪೋರ್ಟ್ನಿಂದ ವೇಣುಗೋಪಾಲ್ ಹೊರಗೆ ಬರ್ತಿದ್ದಂತೆ, ಬೆಂಬಲಿಗರು ಡಿಸಿಎಂ ಡಿ.ಕೆ.ಶಿವಕುಮಾರ್ ಪರ ಘೋಷಣೆಗಳನ್ನ ಕೂಗಿದ್ದಾರೆ. ಡಿಕೆಶಿ ಆಪ್ತ ಮಿಥುನ್ ರೈ ಹಾಗೂ ಬೆಂಬಲಿಗರು ಘೋಷಣೆ ಕೂಗಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಇತ್ತ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ, ಅವರ ಬೆಂಬಲಿಗರು ಪೂರ್ಣಾವಧಿ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ ಪರಿಣಾಮ ತಳ್ಳಾಟ-ನೂಕಾಟ ಉಂಟಾಗಿ, ಏರ್ಪೋರ್ಟ್ನಿಂದ ಎಕ್ಸಿಟ್ ಆಗಲು ವೇಣುಗೋಪಾಲ್ ಹರಸಾಹಸ ಪಡುವಂತಾಯ್ತು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ನಮ್ಮ ನಾಯಕರ ಪರವಾಗಿ ನಾವು ಘೋಷಣೆ ಕೂಗಿದ್ದೇವೆ. ಸಿದ್ದರಾಮಯ್ಯ ಕೂಡ ನಮ್ಮ ನಾಯಕರೇ. ಆದ್ರೆ ಡಿ.ಕೆ.ಶಿವಕುಮಾರ್ ಅವ್ರಿಗೆ ಸಿಎಂ ಆಗಲು ಒಂದು ಅವಕಾಶ ಸಿಗ್ಬೇಕು ಅಂತಾ ಅವರು ಆಗ್ರಹಿಸಿದ್ದಾರೆ.

