ಬಹಿರಂಗ ಪ್ರಶ್ನೆಗಳಿಗೆ ಉತ್ತರಿಸುತ್ತೀರಾ ಮುಖ್ಯಮಂತ್ರಿಗಳೇ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ನಮ್ಮನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೀರಿ, ಅದಕ್ಕೆ ಮೊದಲು ನಮ್ಮ ಬಹಿರಂಗ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ ಮಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಸದ ವಸ್ತುಗಳಿಲ್ಲ”. ನಿಮ್ಮ ಸರ್ಕಾರದ  ಸರತೀ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಟೀಕಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯಬಹುದು ಎಂದು ದಾವಣಗೆರೆ ಕಾರ್ಯಕ್ರಮದಲ್ಲಿ ಬಾಲಿಶವಾಗಿ ಟೀಕೆ ಮಾಡಿದ್ದೀರಿ ಎಂದು ವಿಜಯೇಂದ್ರ ಹರಿಹಾಯ್ದರು.

- Advertisement - 

1 ನಿಮ್ಮ ಹೊಣೆಗೇಡಿತನದ ನಿರ್ಧಾರದಿಂದಾಗಿ ಕ್ರಿಕೆಟ್ ಕಾಲ್ತುಳಿತದಲ್ಲಿ ಮಡಿದವರು, ನೊಂದವರಿಗಾಗಿ ಕನಿಷ್ಠವೂ ನೀವು ಮಿಡಿಯಲ್ಲಿಲ್ಲ, ನೈತಿಕ ಹೊಣೆ ಹೊರುವ ಮಾತೇ ಹೊರಡುವುದಿಲ್ಲ.

- Advertisement - 

2 ಅಧಿಕಾರಕ್ಕೆ ಅಂಟಿ ಕೂರುವ ಜಾಯಮಾನಕ್ಕೆ ಸೇರಿದ  ನೀವು  165 ಕೋಟಿ ವ್ಯಯಿಸಿದ ಕಾಂತರಾಜು ವರದಿಗೆ ರಾಹುಲ್ ಗಾಂಧಿ ಅಣತಿ ಯಂತೆ ತರ್ಪಣ ಬಿಟ್ಟು ಅಹಿಂದವರ್ಗಕ್ಕೆ ಮಕ್ಮಲ್ ಟೋಪಿ ಹಾಕಿದಿರಿ ಎಂದು ಅವರು ಆರೋಪಿಸಿದರು.

3 ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಸೇರ್ಪಡೆಗೊಳಿಸಿ ಐತಿಹಾಸಿಕ ಅಧಿಸೂಚನೆ ಹೊರಡಿಸಿರುವ ಹೆಮ್ಮೆಯ ನರೇಂದ್ರ ಮೋದಿ ಜೀ ಅವರ ಸರ್ಕಾರದ ದಿಟ್ಟ ನಿರ್ಧಾರವನ್ನು ಅಭಿನಂದಿಸುವ ಬದಲು ಅದಕ್ಕೂ ಅಪಸ್ವರ ನುಡಿಯುತ್ತಿದ್ದೀರಿ, ರಾಜ್ಯವೇ ಹೊಸದಾಗಿ ಜಾತಿ ಗಣತಿ ನಡೆಸುತ್ತೇವೆಂದು ಬೊಗಳೆ ಬಿಡುತ್ತಿದ್ದೀರಿ, ಇದಕ್ಕಾಗಿ ಜನರ ತೆರಿಗೆಯ ಇನಷ್ಟು ಕೋಟಿ ಹಣ ಚೆಲ್ಲಲು ಸಿದ್ಧರಾಗಿದ್ದೀರಿ ಎಂದು ತೀಕ್ಷ್ಣವಾಗಿ ಅವರು ಪ್ರಶ್ನಿಸಿದ್ದಾರೆ.

- Advertisement - 

4 ಅಂತರಾಷ್ಟ್ರೀಯ ಮಾರುಕಟ್ಟೆಯನ್ನವಲಂಬಿಸಿ ಏರಿಕೆಯಾಗುವ ಚಿನ್ನದ ದರಕ್ಕೂ ಮೋದಿಯವರೇ ಕಾರಣ ಎಂಬ ನಿಮ್ಮ ಹೇಳಿಕೆ ಅತ್ಯಂತ ಹಾಸ್ಯಸ್ಪದ ಹಾಗೂ ಜನರನ್ನು ಮೂರ್ಖರನ್ನಾಗಿಸುವ ವ್ಯರ್ಥ ಪ್ರಯತ್ನ. ಇನ್ನಿಲ್ಲದಂತೆ ಪ್ರತಿಯೊಂದು ವಸ್ತುಗಳ ಮೇಲೂ ಪ್ರತಿ ದಿನವೂ ಬೆಲೆ ಏರಿಕೆಯ ಬರೆ ಎಳೆಯುತ್ತಲೇ ಇದ್ದೀರಿ ಎಂದು ವಿಜಯೇಂದ್ರ ಟೀಕಿಸಿದರು.

ಸೂರು ಕಟ್ಟಿಕೊಳ್ಳುವ ಜನರ ಕನಸುಗಳನ್ನು ಭಗ್ನಗೊಳಿಸಲು ದುಪ್ಪಟು ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದು ನೀವಲ್ಲವೇ? ಡೀಸೆಲ್ ದರ ಏರಿಕೆಯಾದರೂ ಕೇಂದ್ರ ಸರ್ಕಾರ ಜನರ ಮೇಲೆ ಹೇರಲಿಲ್ಲ ಆದರೆ ರಾಜ್ಯದಲ್ಲಿ ಪ್ರತಿ ಲೀಟರ್ ಗೆ 2 ರೂ ಡೀಸೆಲ್ ದರ ಏರಿಕೆ ಮಾಡಿದ್ದು ನೀವಲ್ಲದೇ ಮತ್ಯಾರು? ಎಂದು ಅವರು ಪ್ರಶ್ನಿಸಿದರು.

ಹಾಲು ಬಿಸಿಯಾಗುವ ಮುನ್ನವೇ ಅದರ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟಿಸಿದವರಾರು?
ಕಳೆದೆರಡು ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿ ನಿಲ್ಲಿಸಿರುವುದು ನಿಮ್ಮ ಆಡಳಿತದಲ್ಲಲ್ಲವೇ
?

ಶಕ್ತಿ ಯೋಜನೆ ಕೊಟ್ಟಿದ್ದೇವೆಂದು ಹೇಳಿ, ಬಸ್ ಪ್ರಯಾಣ ದರ ಹೆಚ್ಚಿಸಿದವರು ನೀವಲ್ಲವೇ? ಎಂದು ವಿಜಯೇಂದ್ರ ಪ್ರಶ್ನಿಸಿದರು.

ದಿನನಿತ್ಯ ತಮ್ಮ ಸುಲಲಿತ ಪ್ರಯಾಣಕ್ಕಾಗಿ ಮೆಟ್ರೋ ಅವಲಂಭಿಸಿರುವ ಪ್ರಯಾಣಿಕರಿಗೆ ದರ ಹೆಚ್ಚಳದ ಬರೆ ಎಳೆದವರು ನೀವಲ್ಲವೇ?

ಉಚಿತ ವಿದ್ಯುತ್ ಕೊಡುತ್ತೇವೆಂದು ಹೇಳಿ, ದಿನದಿಂದ ದಿನಕ್ಕೆ ವಿದ್ಯುತ್ ಬಿಲ್ ದರ ಏರಿಸುತ್ತಿರುವವರು ನೀವಲ್ಲವೇ?
ಕುಡಿಯುವ ನೀರಿನ ದರ ಏರಿಕೆ ಮಾಡಿ ಜನಸಾಮಾನ್ಯರ ಗಂಟಲು ಒಣಗಿಸಿದವರು ನೀವೇ ಅಲ್ಲವೇ
?
 ಎಲ್ಲಾ ಅಗತ್ಯ ಸರಕು – ಸೇವೆಗಳ ಬೆಲೆ ಏರಿಸಿ ಸಾಮಾನ್ಯವರ್ಗದ ಜನರ ಬದುಕು ಹಿಂಡುತ್ತಿರುವ ಸರ್ಕಾರ ನಿಮ್ಮದಲ್ಲವೇ? ಎಂದು ವಿಜಯೇಂದ್ರ ಟೀಕಾಪ್ರಹಾರ ಮಾಡಿದರು.

ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರಸಿತುಎಂಬಂತೆ  ನಿಮ್ಮ ಜನವಿರೋಧಿ ದುರಾಡಳಿತದ ವಿರುದ್ಧ ಸ್ಫೋಟಗೊಳ್ಳುತ್ತಿರುವ ಜನಾಕ್ರೋಶದ ದಿಕ್ಕು ತಪ್ಪಿಸಲು ನಿತ್ಯ ಕಸರತ್ತು ಮಾಡುತ್ತಿದ್ದೀರಿ, ಅಭಿವೃದ್ಧಿಗೆ ಸಂಪೂರ್ಣ ಎಳ್ಳುನೀರು ಬಿಟ್ಟಿದ್ದೀರಿ, ಹತ್ತು ಹಲವು ಸಮಸ್ಯೆಗಳ ಮುಳ್ಳುಗಳು ನಿಮ್ಮ ಸರ್ಕಾರದ ಚಕ್ರವನ್ನು ಚುಚ್ಚುತ್ತಿವೆ, ಪಂಚರ್ ಹಾಕಿಸಿಕೊಳ್ಳುವ ಸ್ಥಿತಿಯಲ್ಲಿಯೂ ಇಲ್ಲದ ನಿಮ್ಮ ಸರ್ಕಾರ ನಲುಗುತ್ತಿದೆ, ಇನ್ನೆಷ್ಟು ದಿನ ನಿಮ್ಮ ಕಪಟ ಸುಳ್ಳಿನ ನಾಟಕ? ಎಂದು ವಿಜಯೇಂದ್ರ ಪ್ರಶ್ನಿಸಿದರು.

ಸಿದ್ಧತೆ-ಬದ್ಧತೆ ಇಲ್ಲದ ಸಿದ್ದರಾಮಯ್ಯನವರೇ, ನಿಮ್ಮ ಪ್ರತಿ ಹೆಜ್ಜೆಯೂ ಬೆಲೆ ಏರಿಕೆಯ ಅಚ್ಚು ಭ್ರಷ್ಟತೆಯ ಕಪ್ಪಚ್ಚು ತಲೆ ಎತ್ತುತ್ತಿದೆ ಹೆಚ್ಚೆಚ್ಚು ಜನರಿಗೆ ಹಚ್ಚುತ್ತಿದೆ ಕಿಚ್ಚು ಬಿಡಿಸಲಿದೇ ನಿಮಗೆ ಅಧಿಕಾರದ ಹುಚ್ಚು
ನರೇಂದ್ರ ಮೋದಿ ಜೀ
ಜನಪ್ರಿಯತೆಯ ಪಡಿಯಚ್ಚು ನಿಮಗಿನ್ನಿಲ್ಲದ ಹೊಟ್ಟೆಕಿಚ್ಚು ಮೋದಿ ಜೀ ಎಂದರೆ ಶಿಖರದಚ್ಚು ತಾಗದು ಎಂದಿಗೂ ನಿಮ್ಮ   ಅಪಪ್ರಚಾರದ ಟೊಳ್ಳಚ್ಚು ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

 

 

Share This Article
error: Content is protected !!
";