ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ದಲಿತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡಲು ಸಾಧ್ಯವಾಗದೆ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಚುನಾವಣೆ ಪೂರ್ವದಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯ ಸೇರಿ ಎಲ್ಲರಿಗೂ ನ್ಯಾಯ ಕೊಡುವುದಾಗಿ ಹಾಗೂ ಅಭಿವೃದ್ಧಿ ಮಾಡುವುದಾಗಿ ಕಾಂಗ್ರೆಸ್ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಓಲೈಕೆ ರಾಜಕಾರಣಕ್ಕೆ ಕಟ್ಟುಬಿದ್ದು ಪರಿಶಿಷ್ಟರಿಗೆ ದ್ರೋಹ ಬಗೆದಿದೆ.ಈ ನಿಟ್ಟಿನಲ್ಲಿ ರಾಜ್ಯದ ಎಸ್‍ಸಿ, ಎಸ್‍ಟಿ ಸಮುದಾಯಗಳ ಹಣವನ್ನು ದುರುಪಯೋಗ ಮಾಡುವ ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ 14 ತಂಡಗಳನ್ನು ರಚಿಸಿ ಜನಾಂದೋಲನ ರೂಪಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ನ್ಯಾಯ ಒದಗಿಸುವ ವರೆಗೆ ಬಿಜೆಪಿ ಹೋರಾಟ ನಿರಂತರವಾಗಿ ನಡೆಸಲಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ರಾಜ್ಯ ಉಪಾಧ್ಯಕ್ಷರಾದ ಬೈರತಿ ಬಸವರಾಜ್, ಹಾಲಪ್ಪ, ಶಾಸಕರಾದ ಎಸ್.ಆರ್.ವಿಶ್ವನಾಥ್, ಮಾನಪ್ಪ ವಜ್ಜಲ್, ಉದಯ್ ಗರುಡಾಚಾರ್, ರಘು, ಸಿಮೆಂಟ್ ಮಂಜು, ಶ್ರೀಮತಿ ಭಗೀರತಿ ಮರುಳ್ಯ, ಶಾಸಕರು ಹಾಗೂ ಜಿಲ್ಲಾಧ್ಯಕ್ಷರಾದ ಸಿ.ಕೆ.ರಾಮಮೂರ್ತಿ, ಪ್ರಕೋಷ್ಠಗಳ ಸಂಯೋಜಕರಾದ ದತ್ತಾತ್ರಿ, ಜಿಲ್ಲಾಧ್ಯಕ್ಷ ಎಸ್.ಶ್ರೀ ಹರೀಶ್, ಸಪ್ತಗಿರಿ ಗೌಡ ಸೇರಿದಂತೆ ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.