ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ ಜೂನ್‌ತಿಂಗಳಿಂದಲೂ ನಾಡಿನ ರೈತರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದ ರೈತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 622.54 ಕೋಟಿ ಬಾಕಿ ಹಣವನ್ನು ಬಾಕಿ ಉಳಿಸಿಕೊಂಡಿರುವುದು ರೈತರ ಬಗೆಗೆ ಈ ಸರ್ಕಾರಕ್ಕಿರುವ ಅಸಡ್ಡೆತನವನ್ನು ಸಾಕ್ಷೀಕರಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದಾರೆ.
ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗಿ ಜನ ಸಾಮಾನ್ಯರ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಸದಾ ಸಜ್ಜಾಗಿರುವ ಸರ್ಕಾರ ಅನ್ನದಾತರ ಬಾಕಿ ಪಾವತಿಗೆ ಮನಸ್ಸು ಮಾಡುತ್ತಿಲ್ಲ. ಇತ್ತ ಬಡವರಿಗೂ ಉಪಕಾರಿಯಾಗಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕನ್ನೂ ಹಸನಾಗಿಸುತ್ತಿಲ್ಲ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಅಭಿವೃದ್ಧಿ ಶೂನ್ಯ ಆಡಳಿತದ ಮೂಲಕ ರೈತರ ಶ್ರೇಯೋಭಿವೃದ್ಧಿಯೆಡೆಗೆ ಒಂದೇ ಒಂದು ಹೆಜ್ಜೆ ಇಡದ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದೆ. ಹಾಲು ಉತ್ಪಾದನೆಯನ್ನೇ ಉಪಕಸುಬನ್ನಾಗಿಸಿಕೊಂಡು ಜೀನವ ನಡೆಸುತ್ತಿರುವ ಲಕ್ಷಾಂತರ ರೈತರ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ವಿಜಯೇಂದ್ರ ಆಗ್ರಹಿಸಿದ್ದಾರೆ.