ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕಾರ್ಖಾನೆಗಳಿಂದ ಹೊರ ಬರುವಂತಹ ರಾಸಾಯಿನಿಕ ತ್ಯಾಜ್ಯ ನೀರು ಅಂತರ ಜಲಕ್ಕೆ ಸೇರಿ ಕೊಳವೆ ಬಾವಿಗಳಲ್ಲಿನ ನೀರು ಕಪ್ಪು ಮಿಶ್ರಿತ ಕೊಳಚೆ ನೀರು ಕಂಡು ಬಂದಿದ್ದು, ಅಂತರ್ಜಲದ ನೀರು ಆತಂಕಕಾರಿ ಮಟ್ಟದಲ್ಲಿ ಕಲುಷಿತವಾಗಿದೆ ಎಂಬುದು ಸಾಬೀತಾಗಿದೆ.
ತಾಲ್ಲೂಕಿಗೆ ಕೆಲವೇ ಕಿಲೋಮೀಟರ್ ದೂರವಿರುವ ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೇಣುಗೋಪಾಲ್ ರವರ ತೋಟದಲ್ಲಿನ ಕೊಳವೆ ಬಾವಿಯಲ್ಲಿ ಕಪ್ಪು ಬಣ್ಣದ ನೀರು ಹೊರಗೆ ಬರುತ್ತಿದೆ. ದೊಡ್ಡತುಮಕೂರು ಕೆರೆಯಿಂದ ಕಾಕೋಳು ಕೆರೆ ಸಂಪರ್ಕ ಕಾಲುವೆ ಪಕ್ಕದಲ್ಲಿನ ಕೊಳವೆ ಬಾವಿ ಇದಾಗಿದ್ದು, ಕೆರೆಯ ಕಲುಷಿತ ನೀರು ನೇರವಾಗಿ ಅಂತರ್ಜಲಕ್ಕೆ ಸೇರುತ್ತಿರುವ ಪರಿಣಾಮ ಕೊಳವೆ ಬಾವಿಗಳಲ್ಲಿನ ನೀರು ಕಪ್ಪು ಬಣ್ಣಕ್ಕೆ ತಿರುಗಲು ಕಾರಣವಾಗಿದೆ.
ಅರ್ಕಾವತಿ ನದಿ ಪಾತ್ರದ ಕೆರೆಗಳಾದ ಚಿಕ್ಕ ತುಮಕೂರು ಮತ್ತು ದೊಡ್ಡ ತುಮಕೂರು. ಹಾಗು ಕಾಕೋಳು ಕೆರೆಯ ಪಕ್ಕದಲ್ಲಿ ಇರುವ ಹೆಸರಘಟ್ಟ ಕೆರೆಗೆ ಸೇರುವ ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ರಾಸಾಯಿನಿಕ ತ್ಯಾಜ್ಯ ನೀರಿನಿಂದ ಕಲುಷಿತವಾಗಿವೆ, ಶುದ್ಧೀಕರಿಸಿ ನೀರನ್ನು ಕೆರೆಗಳಿಗೆ ಬಿಡುವಂತೆ ಕಳೆದ 10 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ, ಈಗಾಗಲೇ ಮಜರಾ ಹೊಸಹಳ್ಳಿ ಮತ್ತು ದೊಡ್ಡ ತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತರ್ಜಲ ನೀರು ಕುಡಿಯಲು ಯೋಗ್ಯವಲ್ಲ ಎಂಬ ಮಾಹಿತಿ ಪ್ರಯೋಗಾಲಯದ ವರದಿಯಿಂದ ಧೃಡ ಪಟ್ಟಿದೆ.ಈಗ ಅಂತರ್ಜಲ ನೀರು ಕಪ್ಪು ಬಣ್ಣಕ್ಕೆ ತಿರುಗಿರುವುದು ಹೊಸ ಆತಂಕವನ್ನುಂಟು ಮಾಡಿದೆ.
ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಕೊಳವೆ ಬಾವಿಯ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳು ಬೋರ್ ವೇಲ್ ಗೆ ನೇರವಾಗಿ ತ್ಯಾಜ್ಯ ನೀರು ಬಿಟ್ಟಿರುವ ಕಾರಣಕ್ಕೆ ಅಂತರ್ಜಲ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ ಎಂಬ ಸಂಶಯ ಸಹ ಇದೆ.
ಭೂಮಿಯಿಂದ ಹೊರ ತೆಗೆಯಲಾಗುವ ನೀರು ಕಪ್ಪು ಬಣ್ಣ ಇರುವುದರಿಂದ ಈ ಬಾಗದಲ್ಲಿ ಬೆಳೆಯುವ ಗಿಡ ಮರ ಬೆಳೆಗಳು ಯಾವರೀತಿ ಇರಬಹುದು ಎಂಬುದು ಈಗಿನ ಸ್ಥಿತಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.