ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯಾವುದೇ ಗ್ಯಾಂರಟಿ ಯೋಜನೆ ನಿಲ್ಲುವುದಿಲ್ಲ-ಡಿಕೆಶಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರಿಂದ ಜಾರಿಗೆ ತರಲು ಆಗಲಿಲ್ಲ. ಅಕ್ಕ-ತಂಗಿ
, ತಂದೆ-ಮಗ, ಅಪ್ಪ-ಮಕ್ಕಳ ನಡುವೆ ಜಗಳ ತಂದಿಟ್ಟು, ಭಾವನೆಗಳ ಮೇಲೆ ಆಟವಾಡುವುದೇ ವಿರೋಧ ಪಕ್ಷಗಳ ಕೆಲಸವಾಗಿದೆ. ಹೀಗೆ ಮಾಡುವ ಮೂಲಕ ಎಷ್ಟೋ ಮನೆ ಮತ್ತು ಮನಸ್ಸುಗಳನ್ನು ಒಡೆದು ಹಾಕಿವೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.

ಕಂಠೀರವ ಸ್ಟೇಡಿಯಂ ಬಳಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿ ಮಾತನಾಡಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಗ್ಯಾರಂಟಿ ವಿಚಾರವಾಗಿ ಗುರವಾರ ಪ್ರಸ್ತಾಪಿಸಿದ ಮಾತುಗಳ ಬಗ್ಗೆ ಕೇಳಿದಾಗ, ವಿರೋಧ ಪಕ್ಷದವರಿಗೆ ರಾಜಕೀಯ ಹೊರತಾಗಿ ಯಾವ ವಿಚಾರಗಳೂ ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಸಂಸಾರಗಳನ್ನು ಹಾಳು ಮಾಡುತ್ತವೇ ಎಂದು ಹೇಳಿದ್ದರು. ಆದರೆ ಅವರು ಹೇಳಿದಂತೆ ಆಗಲಿಲ್ಲ. ನಮ್ಮ ಕೆಲಸಗಳನ್ನು ನೋಡಿ, ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು. ಅವರು ಹೇಳುವ ಬುದ್ಧಿಮಾತು ನಾವು ಕೇಳಬೇಕು. ನಾನು ಶಕ್ತಿ ಯೋಜನೆ ವಿಚಾರವಾಗಿ ಹೇಳಿರುವ ಮಾತುಗಳನ್ನು ಮತ್ತೊಮ್ಮೆ ಎಲ್ಲರು ಕೇಳಿಸಿಕೊಂಡು ನೋಡಿ ಎಂದು ಸೂಚ್ಯವಾಗಿ ಡಿಕೆಶಿ ಅವರು ತಿಳಿಸಿದರು.

ಶಕ್ತಿ ಯೋಜನೆ ಸೇರಿದಂತೆ ಕಾಂಗ್ರೆಸ್ ಜಾರಿಗೆ ತಂದಿರುವ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ. ಶೇ. 5-10 ರಷ್ಟು ಮಹಿಳೆಯರ ಅಭಿಪ್ರಾಯ ಹೇಳಿದನೇ ಹೊರತು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಒಂದಷ್ಟು ಜನ ಮಹಿಳೆಯರು ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರೂ ಬಸ್ ನಿರ್ವಾಹಕರು ಹಣ ತೆಗೆದುಕೊಳ್ಳಲು ಹೆದರುತ್ತಿದ್ದಾರೆ. ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದೆ ಅಷ್ಟೇ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ನಾನು ಕೆಪಿಸಿಸಿ ಅಧ್ಯಕ್ಷನಾದ ಹಾಗೂ ಡಿಸಿಎಂ ಆದ ನಂತರ ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದಿವೆಯೇ? ನಾವುಗಳು ಅಚ್ಚುಕಟ್ಟಾಗಿ ಸರ್ಕಾರ ಹಾಗೂ ಪಕ್ಷವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಡಿಸಿಎಂ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ವಿಚಾರದಲ್ಲೂ ಮಧ್ಯಪ್ರವೇಶ ಮಾಡಿಲ್ಲ. ಇದುವರೆಗೂ ಇಂತಹ ಘಟನೆ ನಡೆದಿಲ್ಲ. ಅವರು ಹಿರಿಯರಾಗಿ ಸಲಹೆ ನೀಡಿದ್ದಾರೆ. ರಾಷ್ಟ್ರ ರಾಜಕಾರಣದ ವಿಚಾರ ಗಮನದಲ್ಲಿ ಇಟ್ಟುಕೊಂಡು ಮಾತನಾಡಿದ್ದಾರೆ. ಮೀಸಲಾತಿ ವಿಚಾರವಾಗಿ ಒಂದೊಂದು ರಾಜ್ಯ ಒಂದೊಂದು ನೀತಿ ಅಳವಡಿಸಿಕೊಂಡಿವೆ. ಸ್ಥಳೀಯವಾಗಿ ನಿಮ್ಮ ನೀತಿಯನ್ನು ನೀವು ನಿರೂಪಿಸಿಕೊಳ್ಳಿ. ಅದರಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಅವರು ಹೇಳಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಬಿಜೆಪಿ ಹಾಗೂ ಇತರೇ ಪಕ್ಷಗಳ ಆಡಳಿತವಿರುವ ರಾಜ್ಯಗಳು ಸಹ ನಮ್ಮದೇ ಯೋಜನೆಗಳನ್ನು ಅನುಕರಿಸಿವೆ. ಇದು ನಮಗೆ ಹೆಮ್ಮೆ ಹಾಗೂ ಗರಿಮೆಯ ವಿಚಾರ ಎಂದರು.

ವಕ್ಫ್ ಮಂಡಳಿ ಭೂ ವಿವಾದ ಕುರಿತು ಯತ್ನಾಳ್ ಮಾಡುತ್ತಿರುವ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಮಾನಸಿಕವಾಗಿ ಅಸ್ವಸ್ಥರಾಗಿರುವ, ಹುಚ್ಚಾಸ್ಪತ್ರೆ ಸೇರಬೇಕಿರುವ ವ್ಯಕ್ತಿಗಳ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಡಿಕೆಶಿ ಮಾರ್ಮಿಕವಾಗಿ ನುಡಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಹಾಗೂ ಇತರ ಕಾರ್ಯಕ್ರಮ ನೀಡಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ನೀಡಬೇಕು ಎಂದು ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕನ್ನಡ ನಾಡಿಗಾಗಿ ಶಾಲಾ ಮಕ್ಕಳು ಶ್ರಮಪಟ್ಟು ಕಾರ್ಯಕ್ರಮ ಮಾಡಿರುತ್ತಾರೆ ಎಂದು ಅವರು ತಿಳಿಸಿದರು.

 

- Advertisement -  - Advertisement - 
Share This Article
error: Content is protected !!
";