ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ಸಾಹಿತ್ಯ, ಸಂಗೀತ ,ಜಾನಪದ ಕಲೆ ಹಾಗೂ ರಂಗ ಕಲೆಗೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್. ಜಿ .ರಂಗಸ್ವಾಮಿ ಸಕ್ಕರ, ಅಭಿಪ್ರಾಯಪಟ್ಟರು.
ನಗರದ ನೆಹರೂ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯೂರು ತಾಲ್ಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಗೋಷ್ಠಿಯಲ್ಲಿ ರಂಗಭೂಮಿಗೆ ಹಿರಿಯೂರು ತಾಲ್ಲೂಕಿನ ಕೊಡುಗೆ ಕುರಿತು ಮಾತನಾಡಿದರು.
ಹಿರಿಯೂರಿನ ಸಾಂಸ್ಕೃತಿಕ ಅಸ್ಮಿತೆಗೆ ಜಾನಪದ ಕಲೆ, ಸಾಹಿತ್ಯ, ಸಂಗೀತ ಬೆಳಕು ನೀಡಿದ್ದು ರಂಗ ಕಲೆ ಪ್ರಮುಖ ಪಾತ್ರ ವಹಿಸಿದೆ. 1970ರ ದಶಕದಲ್ಲಿ ತೊರೆ ಓಬೇನಹಳ್ಳಿ ಟಿ, ಪಾಂಡುರಂಗ ನಾಯಕ ರವರು ಭಾರತಿ ಕಲಾವಿದರು ಎಂಬ ನಾಟಕ ಸಂಘವನ್ನು ಹುಟ್ಟು ಹಾಕಿದರು. ಇವರ ಜೊತೆಯಲ್ಲಿ ಲಕ್ಷ್ಮಣ್, ರಂಗೇನಹಳ್ಳಿ ಗಿರಿಯಣ್ಣ, ರಾಜಣ್ಣ ಶೆಟ್ಟಿ, ಬಿ.ವಿ. ಮಾಧವ, ಎಚ್.ಎನ್. ನರಸಿಂಹಯ್ಯ, ಹೆಚ್.ಆರ್. ಕಣ್ಣಪ್ಪ, ಎಲ್. ನಾರಾಯಣ ಚಾರ್ , ಜಿ. ಧನಂಜಯ ಕುಮಾರ್, ಕೆಂಚಪ್ಪ, ವಿ.ಎಚ್. ರಾಜು, ನಾಗೇನಹಳ್ಳಿ ತಿಮ್ಮಯ್ಯ, ಡಾ.ಎಂ. ಎನ್ . ಶ್ರೀಪತಿ, ಅಮೀರ್ ಖಾನ್ ಇತರರು ಜೊತೆಗೂಡಿ ಅಂಗುಲಿಮಾಲ, ವಾತ್ಸಲ್ಯ, ಸಿಂಹಗಡ, ಅಣ್ಣ ತಂಗಿ, ಆದರ್ಶ ಪ್ರೇಮ, ರಕ್ತರಾತ್ರಿ , ರತ್ನ ಮಾಂಗಲ್ಯ ,ರಾಜ ವೀರ ಮದಕರಿ ನಾಯಕ, ಟಿಪ್ಪು ಸುಲ್ತಾನ್, ಎಚ್ಚಮನಾಯಕ ಹೀಗೆ ಹಲವಾರು ನಾಟಕಗಳನ್ನು ಹಿರಿಯೂರಿನ ವಿವಿಧ ಹಳ್ಳಿಗಳಲ್ಲಿ ಬೇರೆ ಬೇರೆ ತಾಲ್ಲೂಕುಗಳಲ್ಲಿ ಅಭಿನಯಿಸಿದ್ದಾರೆ . ಬೆಳಗೆರೆಯ ಕೃಷ್ಣ ಶಾಸ್ತ್ರಿ ರವರು ಬರೆದಿರುವ ಹಳ್ಳಿ ಚಿತ್ರ ನಾಟಕ ರಾಜ್ಯಾದ್ಯಂತ ಪ್ರದರ್ಶನ ಕಂಡಿದೆ.
1948ರಲ್ಲಿ ಸಿ.ಎಸ್ ವೆಂಕಟೇಶಯ್ಯ ರವರು ವಿಜಯ ಕಲಾವಿದರು ಎಂಬ ತಂಡವನ್ನು ಕಟ್ಟಿದರು ಎಂ.ಎಸ್. ಅವಧಾನಿ, ಕೆ.ವಿ.ರಾಮಚಂದ್ರರಾವ್, ಜೊತೆಗೂಡಿ ಜಗಜ್ಯೋತಿ ಬಸವೇಶ್ವರ ಎಚ್ಚಮ ನಾಯಕ ಹಳ್ಳಿ ಚಿತ್ರ . ತ್ರಿವೇಣಿ ಮುಂತಾದ ನಾಟಕಗಳನ್ನು ಅಭಿನಯಿಸಿದರು.
ತರುವಾಯ ತಾಲ್ಲೂಕಿನ ವೃತ್ತಿ ಕಲಾವಿದರು ವೃತ್ತಿ ಕಲಾವಿದರ ಸಂಘವನ್ನು ಕಟ್ಟಿ ಹಲವಾರು ನಾಟಕಗಳನ್ನು ಅಭಿನಯಿಸಿದ್ದಾರೆ. ಜಯಮ್ಮ, ಹನುಮಕ್ಕ, ಭಾಗ್ಯಶ್ರೀ, ವಿಮಾಲಾಕ್ಷಿ, ಜಯಲಕ್ಷ್ಮಿ, ಭಾರತಿ ,ಭುವನೇಶ್ವರಿ, ರಾಜೇಶ್ವರಿ ,ನಗೀನ, ನಿರ್ಮಲ, ಮಮತಾ, ಅಂಬಿಕಾ ಇನ್ನೂ ಮುಂತಾದವರು ವೃತ್ತಿ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ .
ಇವರ ಜೊತೆಯಲ್ಲಿ ಇನ್ನೂ ಹಲವಾರು ಸಂಘ ಸಂಸ್ಥೆಗಳು ಸಹ ಕೆಲಸ ಮಾಡಿವೆ. ಮುಖ್ಯವಾಗಿ ಲಾವಣ್ಯ ಕಲಾ ವೃಂದ, ಫ್ರೆಂಡ್ಸ್ ಕಲಾ ವೃಂದ , ದುರ್ಗಿಗುಡಿ ಕಲಾಸಂಘ, ಸೊಂಡೆಕೆರೆ ಮಂಜುನಾಥ ನಾಟ್ಯ ಕಲಾ ಸಂಘ, ಸಂಪದ ಕಲಾಸಂಘ, ಹೀಗೆ ಹಲವಾರು ಸಂಘ ಸಂಸ್ಥೆಗಳು ಹಿರಿಯೂರಿನ ರಂಗಭೂಮಿಗೆ ತನ್ನದೇ ಆದ ಕೊಡುಗೆಯನ್ನು ನೀಡಿವೆ.
ಎನ್.ಎಸ್.ಎಸ್. ಘಟಕದ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಡಿ. ಧರಣೇಂದ್ರಯ್ಯ ಮಾತನಾಡಿ ಹಿರಿಯೂರು ತಾಲ್ಲೂಕು ಜಾನಪದ ಕಲೆ ರಂಗಭೂಮಿಗೆ ಮಾತ್ರವಲ್ಲದೇ ರಾಜಕೀಯ ಶಕ್ತಿಯಾಗಿ ಕೆಲಸ ಮಾಡಿದೆ. ವಿ.ಮಸಿಯಪ್ಪ, ಬಿ. ಎಲ್. ಗೌಡ್ರು, ಮಸ್ಕಲ್ ರಾಮಯ್ಯ, ಹೆಚ್.ಏಕಾಂತಯ್ಯ , ಕೆ.ಎಚ್. ರಂಗನಾಥ್, ಡಿ. ಮಂಜುನಾಥ್, ಡಿ. ಸುಧಾಕರ್ ಪೂರ್ಣಿಮಾ ಶ್ರೀನಿವಾಸ್, ಹೀಗೆ ಹಲವಾರು ರಾಜಕಾರಣಿಗಳಿಗೆ ರಾಜಕೀಯ ಶಕ್ತಿಯನ್ನು ನೀಡಿದೆ ಎಂದು ಹೇಳಿದರು.
ಹಿರಿಯೂರು ತಾಲ್ಲೂಕಿನ ನೀರಾವರಿಯ ಚಿಂತನ-ಮಂಥನ ಕುರಿತು ರಾಜ್ಯ ವಿಭಾಗಿಯ ರೈತ ಸಂಘದ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿದರು. ಹಾಗೆಯೇ ತಾಲ್ಲೂಕಿನ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟತೆ ಕುರಿತು ಉಪನ್ಯಾಸಕರಾದ ಜಿ.ಡಿ.ಚಿತ್ತಣ್ಣ ಮಾತನಾಡಿದರು.
ಗೋಷ್ಠಿಯ ಅಧ್ಯಕ್ಷತೆ ಸಾಹಿತಿ ಜಿ.ಪರಮೇಶ್ವರಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷ ಎಂ.ಜಿ.ರಂಗಸ್ವಾಮಿ, ಕಸಾಪ ಕೋಶಾಧ್ಯಕ್ಷ ಜಿ. ಪ್ರೇಮಕುಮಾರ್, ಆರನಕಟ್ಟೆ ಶಿವಕುಮಾರ್, ಜೆ.ನಿಜಲಿಂಗಪ್ಪ, ಹರ್ತಿಕೋಟೆ ಮಹಾಸ್ವಾಮಿ, ಚಮನ್ ಶರೀಫ್, ಶಿಕ್ಷಕರಾದ ರಾಧ, ಕೆ.ಜಿ. ಹನುಮಂತರಾಯಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

