ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾನೂನು ಮತ್ತು ಸಂಸದೀಯ ಸಚಿವರಾದ ಎಚ್.ಕೆ. ಪಾಟೀಲ್ ಸೇರಿದಂತೆ ವಿವಿಧ ಅಧಿಕಾರಿಗಳನ್ನು ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾನಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಒತ್ತಾಯಿಸಿದರು.
ಸೋಮವಾರ ಬೆಳಿಗ್ಗೆ ಸಚಿವರಾದ ಎಚ್.ಕೆ. ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು, ಬಳಿಕ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ. ತ್ರಿಲೋಕ್ ಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರನ್ನು ತಂಡದ ಪದಾಧಿಕಾರಿಗಳು ಭೇಟಿ ಮಾಡಿದರು.
ಮನವಿಗೆ ಸಿಗದ ಸ್ಪಂದನೆ:
ಸ್ಥಳೀಯ ಜಿಲ್ಲಾ ಮಟ್ಟದ ದಿನಪತ್ರಿಕೆಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯಿಂದ ನೀಡುವ ಜಾಹೀರಾತಿನ ಮೂಲ ದರಕ್ಕೆ ಪ್ರತಿ ಎರಡು ವರ್ಷಕ್ಕೆ ಶೇ.12ರಷ್ಟು ದರ ಹೆಚ್ಚಳ ಮಾಡಬೇಕು ಎಂಬ ನಿಯಮವಿದೆ.
ಆದರೆ ಕಳೆದ ಒಂದುವರೆ ವರ್ಷದಿಂದ ದರ ಹೆಚ್ಚಳವಾಗಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಸಣ್ಣ ಮತ್ತು ಮಧ್ಯಮ ದಿನಪತ್ರಿಕೆಗಳನ್ನು ನಡೆಸುವುದು ಮಾಲೀಕರು ಮತ್ತು ಸಂಪಾದಕರಿಗೆ ತೀವ್ರ ಸಮಸ್ಯೆಯಾಗಿದೆ. ಮುದ್ರಣ ಸಾಮಾಗ್ರಿ ಸೇರಿದಂತೆ ಪ್ರತಿಯೊಂದರ ಬೆಲೆ ಹೆಚ್ಚಳವಾಗಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೆಗಳನ್ನು ನಡೆಸುವುದು ಸವಾಲಿನ ಕೆಲಸವಾಗಿದೆ.
ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರಿದ ತಕ್ಷಣದಿಂದ ಎಸ್ಸಿ ಮತ್ತು ಎಸ್ಟಿ ಸಮುದಾಯದ ಮಾಲೀಕತ್ವದ ಪತ್ರಿಕೆಗಳಿಗೆ ಮಾಸಿಕ ಎರಡು ಪುಟ ಪ್ರೋತ್ಸಾಹದ ಜಾಹೀರಾತು ನೀಡಲಾಗುತ್ತಿದೆ ಎಂದು ಎ.ಸಿ.ತಿಪ್ಪೇಸ್ವಾಮಿ ಮಾಹಿತಿ ನೀಡಿದರು.
5 ವರ್ಷ ಜಾಹೀರಾತು ಇಲ್ಲ:
ಹಿಂದುಳಿದ ವರ್ಗದ ಮಾಲೀಕತ್ವದಲ್ಲಿರುವ ಪತ್ರಿಕೆಗಳಿಗೆ ಮಾಧ್ಯಮಪಟ್ಟಿಗೆ ಸೇರಿದ ಐದು ವರ್ಷದವರೆಗೂ ಯಾವುದೇ ವಿಶೇಷ, ಪ್ರೋತ್ಸಾಹದ ಜಾಹೀರಾತು ನೀಡುತ್ತಿಲ್ಲ. ಹೀಗಾಗಿ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದ ಸಂಪಾದಕರು ಆರ್ಥಿಕ ಸಮಸ್ಯೆಗೆ ಸಿಲುಕಿದ್ದಾರೆ.
ಐದು ವರ್ಷದೊಳಗಿನ ಓಬಿಸಿ ಪತ್ರಿಕೆಗಳಿಗೆ ಪ್ರೋತ್ಸಾಹದ ರೂಪದಲ್ಲಿ ಒಂದು ಪುಟ ಜಾಹೀರಾತು ನೀಡಬೇಕೆಂಬ ಬೇಡಿಕೆ ಈಗಾಗಲೇ ಇಲಾಖೆಗೆ ಮತ್ತು ಸರ್ಕಾರಕ್ಕೆ ಸಲ್ಲಿಸಿ ಆರು ತಿಂಗಳು ಗತಿಸಿದರೂ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಎ.ಸಿ.ತಿಪ್ಪೇಸ್ವಾಮಿ ಅವರು ಕಾನೂನು ಸಚಿವರಾದ ಹೆಚ್.ಕೆ. ಪಾಟೀಲ್ ಅವರಿಗೆ ಮನವರಿಕೆ ಮಾಡಿದರು.
ಆಯುಕ್ತರಿಗೆ ಸಚಿವ ಪಾಟೀಲ್ ಸೂಚನೆ:
ಸಂಪಾದಕರ ಸಂಘದ ಮನವಿ ಆಲಿಸಿದ ಸಚಿವರಾದ ಹೆಚ್.ಕೆ. ಪಾಟೀಲ್ ಅವರು ಕೂಡಲೇ ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ, ಸಂಪಾದಕರ ಸಂಘದಿಂದ ಸಲ್ಲಿಕೆಯಾಗಿದ್ದ ಮನವಿಪತ್ರದ ಕಡತಗಳ ಸ್ಥಿತಿಗತಿಗಳ ಮಾಹಿತಿ ಪಡೆದುಕೊಂಡರು.
ಸ್ಥಳೀಯ ದಿನಪತ್ರಿಕೆಗಳ ಸಂಪಾದಕರ ಸಂಘದ ನ್ಯಾಯೋಚಿತ ಬೇಡಿಕೆ ಈಡೇರಿಸಲು ಗಮನ ನೀಡಬೇಕು, ಇಲಾಖೆ ನಿಗಧಿ ಮಾಡಿರುವ ಜಾಹೀರಾತು ದರಕ್ಕೆ ಶೇ.12ರ ದರ ಹೆಚ್ಚಳ ಮಾಡುವ ಕುರಿತು ಕೂಡಲೇ ಕ್ರಮಕೈಗೊಂಡು ಆದೇಶ ಹೊರಡಿಸುವಂತೆ ಸೂಚನೆ ಕೊಟ್ಟರು.
ಐದು ವರ್ಷದೊಳಗಿನ ಓಬಿಸಿ ಸಮುದಾಯದ ಸಂಪಾದಕರ ಪತ್ರಿಕೆಗಳಿಗೆ ಒಂದು ಪುಟ ಜಾಹೀರಾತು ನೀಡುವ ಪ್ರಸ್ತಾವನೆ ತಕ್ಷಣಕ್ಕೆ ಕಡತ ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕಳಿಸಬೇಕು ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ನಿಂಬಾಳ್ಕರ್ ಅವರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷರಾದ ಮಂಜುನಾಥ ಅಬ್ಬಿಗೇರಿ, ರಾಮಕೃಷ್ಣ, ಭೀಮರಾಯ ಹದ್ದಿನಾಳ, ನವೀನ್,ಹರೀಶ್, ಕೃಷ್ಣಮೂರ್ತಿ, ಶಿವಶಂಕರ್, ದಿನೇಶ್ ಗೌಡಗೆರೆ, ಗುರುಬಸವಯ್ಯ, ನಾಗೇಶ್, ಗೋಪಾಲ್ ಸೇರಿದಂತೆ ರಾಜ್ಯ ಘಟಕದ ಪದಾಧಿಕಾರಿಗಳು, ವಿವಿಧ ಜಿಲ್ಲಾ ಘಟಕದ ಪದಾಧಿಕಾರಿಗಳು, ನಾಮನಿರ್ದೇಶನ ಸದಸ್ಯರು ಉಪಸ್ಥಿತರಿದ್ದರು.
“ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ಡಾ.ತ್ರಿಲೋಕ್ ಚಂದ್ರ ಅವರನ್ನು ಸೆಪ್ಟಂಬರ್ 30 ರ ಸೋಮವಾರ ಮಧ್ಯಾಹ್ನ 1:30 ರ ಸುಮಾರಿಗೆ ವಿಧಾನಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು”.