ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನಲ್ಲಿ ಹಲವು ಗೊಬ್ಬರ ಅಂಗಡಿಗಳು ಕೃತಕ ಕೊರತೆ ಸೃಷ್ಠಿಸಿ, ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ರೈತರಿಗೆ ಭಾರೀ ನಷ್ಟ ಉಂಟಾಗಿದೆ ಎಂದು ಹಿರಿಯೂರು ಕಾಂಗ್ರೆಸ್ ಕಿಸಾನ್ ಘಟಕದ ತಾಲೂಕು ಅಧ್ಯಕ್ಷ ಜೆ.ಜಿ.ಹಳ್ಳಿ ಕೇಶವ್ ಗಂಭೀರ ಆರೋಪ ಮಾಡಿದ್ದಾರೆ.
ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯೂರು ಕಾಂಗ್ರೆಸ್ ಕಿಸಾನ್ ಘಟಕ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಎಂಆರ್ ಪಿ ಬೆಲೆಗಿಂತ ಅಧಿಕ ಹಣಕ್ಕೆ ಮತ್ತು ಕೃತಕ ಅಭಾವ ಸೃಷ್ಠಿಸುವ ವರ್ತಕರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಕೇಶವ್ ಒತ್ತಾಯಿಸಿದರು.
ತಾಲೂಕು ಆಡಳಿತ, ಕೃಷಿ, ತೋಟಗಾರಿಕೆ ಇಲಾಖೆಗಳ ನೇತೃತ್ವದಲ್ಲಿ ಗೊಬ್ಬರ ಮಾರಾಟಗಾರರೊಂದಿಗೆ ತುರ್ತು ಸಭೆ ಕರೆಯುವಂತೆ ಹಾಗೂ ನಿಗದಿತ ದರದಲ್ಲಿ ಮಾತ್ರ ಗೊಬ್ಬರ ಮಾರಾಟವಾಗುವಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೇಶವ್ ಮನವಿ ಮಾಡಿದರು.
ಹಿರಿಯೂರು ಕಾಂಗ್ರೆಸ್ ಕಿಸಾನ್ ಘಟಕ ರೈತರ ಹಿತಕ್ಕಾಗಿ ನಿರಂತರ ಹೋರಾಟ ಮುಂದುವರಿಸಲಿದೆ ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯೂರು ಕಿಸಾನ್ ಘಟಕದ ಉಪಾಧ್ಯಕ್ಷ ಮಾರುತಿ (ಸ್ಟೀಫನ್), ಪ್ರಧಾನ ಕಾರ್ಯದರ್ಶಿ ರವಿ, ಕಾರ್ಯದರ್ಶಿ ಕಾರ್ತಿಕ್, ಮಂಜುನಾಥ್, ಜಬಿವುಲ್ಲಾ, ಅವಿನಾಶ್, ಅರುಣ್ ಜಿ.ಎ., ಕಿರಣ್, ಕೀರ್ತನ್, ಮನು, ರಾಹುಲ್ ಉಪಸ್ಥಿತರಿದ್ದರು.

