ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಸವಾದಿ ಶರಣರ ವಚನಗಳಲ್ಲಿನ ಮಾನವೀಯ ಹಾಗೂ ಸಾಮಾಜಿಕ ಆಶಯಗಳನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ‘ವಚನ ವಿಶ್ವವಿದ್ಯಾಲಯ’ ಸ್ಥಾಪನೆಯ ಅಗತ್ಯತೆ ಇದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಈ ಸಂಬಂಧ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ವಿವಿಧ ಮಠಗಳ ಪರಮಪೂಜ್ಯ ಗುರುಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಕಳೆದ ವರ್ಷ ಅಕ್ಟೋಬರ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯಂತೆ ಬಸವಕಲ್ಯಾಣದಲ್ಲಿ ‘ವಚನ ವಿಶ್ವವಿದ್ಯಾಲಯ’ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಯಿತು ಎಂದು ಸಚಿವರು ತಿಳಿಸಿದರು.
ನಿಯೋಗದಲ್ಲಿ ಪರಮಪೂಜ್ಯರುಗಳಾದ ನಾಡೋಜ ಬಸವಲಿಂಗ ಪಟ್ಟದ್ದದೇವರು, ಡಾ. ತೋಂಟದ ಸಿದ್ದರಾಮ ಸ್ವಾಮಿಗಳು, ಗುರುಮಹಾಂತಾ ಸ್ವಾಮಿಗಳು, ಪ್ರಭುಚನ್ನಬಸವ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಗುರುಗಳು, ಸಚಿವ ಸಂಪುಟದ ಸಹೋದ್ಯೋಗಿ ಈಶ್ವರ ಖಂಡ್ರೆ, ಹಿರಿಯ ಶಾಸಕ ಬಿ.ಆರ್. ಪಾಟೀಲ್, ಸಮಾಜದ ಮುಖಂಡರು ಹಾಗೂ ಹಿರಿಯರು ಉಪಸ್ಥಿತರಿದ್ದರು.

