ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಂ ರಾಜ್ಯ ಮಟ್ಟದ ಪ್ರಶಸ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 08 ಅರ್ಜಿ ಸಲ್ಲಿಸಲು ಕೊನೆಯ ದಿನ.
ಏಪ್ರಿಲ್ 05ರಂದು ಡಾ.ಬಾಬು ಜಗಜೀವನ್ ರಾಂ ಅವರ 119ನೇ ಜನ್ಮ ದಿನಾಚರಣೆ ಮತ್ತು ಏಪ್ರಿಲ್ 14ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯನ್ನು ರಾಜ್ಯಮಟ್ಟದಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 35 ವರ್ಷ ವಯಸ್ಸಾಗಿರಬೇಕು. ಒಬ್ಬ ವ್ಯಕ್ತಿಯು ಕೇವಲ ಒಂದು ಪ್ರಶಸ್ತಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಒಬ್ಬ ವ್ಯಕ್ತಿಯನ್ನು ಒಂದು ಪ್ರಶಸ್ತಿಗೆ ಮಾತ್ರ ಆಯ್ಕೆ ಮಾಡಲಾಗುವುದು. ಪ್ರಶಸ್ತಿಗೆ ಯಾವುದೇ ಜನಾಂಗದ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರಬಾರದು. ರಾಜ್ಯ ಮಟ್ಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ 10 ಜನ ಹಾಗೂ ಜಗಜೀವನ್ ರಾಮ್ ಪ್ರಶಸ್ತಿಗೆ 10 ಜನರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್ ರಾಂ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು 2026ರ ಮಾರ್ಚ್ 8 ರೊಳಗೆ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವರ ಕಚೇರಿಗೆ ಸಲ್ಲಿಸಬೇಕು. ಅರ್ಜಿ ನಮೂನೆಗಳನ್ನು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಪಡೆದುಕೊಳ್ಳಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

