ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ರಾಜ್ಯಮಟ್ಟದ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಕೃಷಿ ಇಲಾಖೆಯಿಂದ ಇದೇ ಡಿಸೆಂಬರ್ 30ರಂದು ಬೆಳಿಗ್ಗೆ 10ಕ್ಕೆ ಚಿತ್ರದುರ್ಗ ನಗರದ ಎಪಿಎಂಸಿ ಯಾರ್ಡ್ ಹತ್ತಿರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದು, ಈ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ. ಡಿ.30 ಅರ್ಜಿ ಸಲ್ಲಿಸಲು ಕೊನೆಯ ದಿನ.
ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹೊರುಪಡಿಸಿ, ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುತ್ತದೆ.
ಅಭ್ಯರ್ಥಿಗಳು ತಮ್ಮ ಭಾವ ಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ, ಬೇಕಾಗುವ ಸಾಮಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ ಭಾಗವಹಿಸಬಹುದು. ಅರ್ಜಿಯನ್ನು 2025ರ ಡಿಸೆಂಬರ್ 30 ಬೆಳಿಗ್ಗೆ 10 ಗಂಟೆಯೊಳಗೆ ಖುದ್ದಾಗಿ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ಎ.ಪಿ.ಎಂ.ಸಿ ರಸ್ತೆ, ಚಿತ್ರದುರ್ಗ – 577501 ಇಲ್ಲಿಗೆ ಸಲ್ಲಿಸಲು ತಿಳಿಸಿದೆ.
ಸ್ಪರ್ಧೆಯಲ್ಲಿ ಭಾವಹಿಸುವ ಅಭ್ಯರ್ಥಿಗಳಿಗೆ ಸೂಚನೆಗಳು: ಪ್ರತಿ ಸ್ಪರ್ಧಿಗೆ ಒಂದೇ ತಿನಿಸು ಸಿಹಿ ಅಥವಾ ಖಾರ ಅಥವಾ ಮರೆತುಹೋದ ಖಾದ್ಯಗಳ ತಿನಿಸು ಮಾಡಲು ಅವಕಾಶವಿರುತ್ತದೆ ತಮ್ಮ ಅರ್ಜಿಯಲ್ಲಿ ನಮೂದಿಸಿದ ತಿನಿಸುಗಳನ್ನು, ಮನೆಯಲ್ಲಿಯೇ ತಯಾರಿಸಿ, 2025ರ ಡಿಸೆಂಬರ್ 30ರಂದು ಜಂಟಿ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಸರಿಯಾಗಿ ಬೆಳಿಗ್ಗೆ 10ಕ್ಕೆ ಪ್ರದರ್ಶಿಸುವುದು. ಪ್ರದರ್ಶಿಸುವ ಮುನ್ನ ಬೆಳಿಗ್ಗೆ 9 ಗಂಟೆಗೆ ನೊಂದಾವಣೆ ಮಾಡಬೇಕು. 2024-25ನೇ ಸಾಲಿನಲ್ಲಿ ಸಿರಿಧಾನ್ಯ ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಮೊದಲನೇ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ಸ್ಪರ್ಧಿಗಳಿಗೆ ಪ್ರಸ್ತುತ ವರ್ಷದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯದ ಸಸ್ಯಹಾರಿ ತಿನಿಸುಗಳಿಗೆ ಮಾತ್ರ ಅವಕಾಶವಿರುತ್ತದೆ.
ಸಿರಿಧಾನ್ಯ ಖಾದ್ಯಗಳು-ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು ಮತ್ತು ಸಾಮೆ ಬೆಳೆಗಳಿಂದ ಸಿಹಿ ಮತ್ತು ಖಾರ ಖಾದ್ಯಗಳನ್ನು ತಯಾರಿಸುವುದು. ಮರೆತುಹೋದ ಖಾದ್ಯಗಳು- ದೇಸಿ ತಳಿಗಳ ಪೌಷ್ಠಿಕಾಂಶದ ಮೌಲ್ಯ, ಬಳಕೆಯಾಗದ ಬೆಳೆಗಳು, ಮರೆತುಹೋದ ಆಹಾರಗಳು, ರೈತರ ಸಾಂಪ್ರದಾಯಿಕ, ಪರಂಪರೆ, ಜನಪದ ಪ್ರಭೇದಗಳು ಎಂದು ಕರೆಯಲ್ಪಡುವ ದೇಸಿ ತಳಿಗಳು, ಸ್ಥಳೀಯ ಅಥವಾ ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ಅಭಿವೃದ್ದಿ / ನಿರ್ವಹಿಸಲ್ಪಡುವ ವಿಶಿಷ್ಟ ಗುಣಲಕ್ಷಣಗಳು, ಪೋಷಕಾಂಶಗಳಲ್ಲಿ ಸಮೃದ್ದ ಮತ್ತು ಭೌಗೋಳಿಕ ಮೂಲಕಗಳ ಕಾರಣದಿಂದ ಕೆಲವೇ ರೈತರು ಬೆಳೆಯುವ ದೇಸಿ ತಳಿಗಳಿಂದ ತಯಾರಿಸುವ ಮರೆದು ಹೋದ ಖಾದ್ಯಗಳು.
ತಯಾರಿಸಿದ ತಿನಿಸುಗಳ ಪ್ರದರ್ಶನ (Display) ತಯಾರಿಕೆಗೆ ಬಳಸಿದ ಸಾಮಗ್ರಿಗಳು (Ingredients), ತೋರಿಕೆ (Appearance), ರುಚಿ (Taste), ಸುವಾಸನೆ (Arom), ಪೌಷ್ಠಿಕತೆ (Nutrients) ಗಳ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು.
ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಅತ್ಯುತ್ಯಮ ಒಂದು ಸಿಹಿ, ಖಾರ (ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ) ಮತ್ತು ಮರೆತು ಹೋದ ಖಾದ್ಯದ ತಿನಿಸನ್ನು (Land Races Products) ಆಯ್ಕೆ ಮಾಡಲಾಗುವುದು.
ಜಿಲ್ಲಾ ಮಟ್ಟಕ್ಕೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಸಿಹಿ, ಖಾರ (ಸಿರಿಧಾನ್ಯ ಖಾದ್ಯಗಳಿಗೆ ಮಾತ್ರ) ಮತ್ತು ಮರೆತು ಹೋದ ಖಾದ್ಯಗಳ ತಿನಿಸಿಗೆ ತಲಾ ರೂ.5000/-, 3000/- ಹಾಗೂ 2000/- ಗಳನ್ನು ನೀಡಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗುತ್ತದೆ. ರಾಜ್ಯ ಮಟ್ಟದ “ಸಿರಿಧಾನ್ಯ” ಮತ್ತು “ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ” ಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತರು ಸ್ವತಃ ತಿನಿಸನ್ನು ತಯಾರಿಸಲು ಅವಶ್ಯವಿರುವ ಸಾಮಗ್ರಿಗಳೊಂದಿಗೆ ಸಿದ್ದರಿರಬೇಕು.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ನಿಗಧಿತ ದಿನಾಂಕದಂದು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳನ್ನು ತಾವೇ ತೆಗೆದುಕೊಂಡು, ನಿಗಧಿತ ಸ್ಥಳ ಹಾಗೂ ಸಮಯದಲ್ಲಿ ಖುದ್ದಾಗಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಸಿದ್ದರಾಗಿರಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.

