ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 2024-25ನೇ ಸಾಲಿನ ಅರ್ಹ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನಸಹಾಯ ಪಡೆಯಲು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (ಎಸ್ಎಸ್ಪಿ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಶೈಕ್ಷಣಿಕ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿರುತ್ತದೆ. 2024-25ನೇ ಸಾಲಿಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ (ಎಸ್ಎಸ್ಪಿ) ಮೂಲಕ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.

ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ಶೈಕ್ಷಣಿಕ ಧನಸಹಾಯವನ್ನು ಎಸ್ಎಸ್ಪಿ ತಂತ್ರಾಂಶದ ಮೂಲಕ ಪಡೆಯಲು ಜಾಲತಾಣ https://kbocwwb.karnataka.gov.in/   ಉಪಯೋಗಿಸಿಕೊಂಡು ಮಂಡಳಿಯ ತಂತ್ರಾಂಶದಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ, ಆಧಾರ್ ಲಿಂಕ್ ಮಾಡಬೇಕು. ಎಸ್ಎಸ್ಪಿ ತಂತ್ರಾಂಶದ ಮೂಲಕ ಶೈಕ್ಷಣಿಕ ಧನಸಹಾಯ ಪಡೆಯಲು ಇದು ಅತ್ಯವಶ್ಯಕವಾಗಿರುವುದರಿಂದ ಈಗಾಗಲೇ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದೇ ಇರುವ ಎಲ್ಲಾ ಕಾರ್ಮಿಕರು ಕೂಡಲೇ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಸಬೇಕಿರುತ್ತದೆ.

ಮಂಡಳಿಯು 2024-25ನೇ ಸಾಲಿನ ಶೈಕ್ಷಣಿಕ ಸಹಾಯಧನಕ್ಕೆ ಮೀಸಲಿಟ್ಟಿರುವ ಅಯವ್ಯಯಕ್ಕೆ ಅನುಗುಣವಾಗಿ ಮಂಡಳಿಯ ನಿರ್ಣಯದಂತೆ ಶೈಕ್ಷಣಿಕ ಧನಸಹಾಯ ಕೋರಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಧನಸಹಾಯ ವಿತರಿಸಲಾಗುವುದೆಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

- Advertisement -  - Advertisement -  - Advertisement - 
Share This Article
error: Content is protected !!
";