ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಫೋಕ್ಸೋ ಕಾಯ್ದೆ ಅನ್ವಯ ಸಂತ್ರಸ್ತ ಮಕ್ಕಳಿಗೆ ಬೆಂಬಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಲು ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಠ 3 ವರ್ಷಗಳ ಅನುಭವದೊಂದಿಗೆ ಸಮಾಜ ಕಾರ್ಯ, ಸೋಷಿಯಾಲಜಿ, ಸೈಕಾಲಜಿ, ಚೈಲ್ಡ್ ಡೆವಲಪ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಪಡೆದವರು ಅರ್ಜಿ ಸಲ್ಲಿಬಹುದು. ಅರ್ಹ ಅಭ್ಯರ್ಥಿಗಳಿಗೆ ಪ್ರತಿ ಪ್ರಕರಣ ಒಂದಕ್ಕೆ ರೂ.3000 ಸಂಭಾವನೆ ನೀಡಲಾಗುವುದು.
ಇದರೊಂದಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಕೆಲಸ ಮಾಡುವ ಆಸಕ್ತ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾವುದೇ ಸಂಸ್ಥೆಗಳು ಕೂಡ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಕ್ಷೇತ್ರ ಕಾರ್ಯವನ್ನು ಮಾಡಲು ಮತ್ತು ಅಪರಾಧ ನ್ಯಾಯ ವ್ಯವಸ್ಥೆಯ ಮೂಲಕ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ತರಬೇತಿ ನೀಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿಯಿಂದ ಅರ್ಜಿಗಳನ್ನು ಪಡೆದು, ಅರ್ಜಿ ಹಾಗೂ ಪ್ರಮಾಣ ಪತ್ರಗಳೊಂದಿಗೆ ಇದೇ ಅ.28ರೊಳಗೆ ನಗರದ ಸ್ಟೇಡಿಯಂ ಹತ್ತಿರದ ಬಾಲಭವನ ಆವರಣದಲ್ಲಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ತಿಳಿಸಿದ್ದಾರೆ.