ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2025-26ನೇ ಸಾಲಿಗೆ ಪ್ರತಿಭಾವಂತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಮೇ 03 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
2025-26ನೇ ಸಾಲಿಗೆ “ಪ್ರತಿಷ್ಠಿತ ಶಾಲೆಗಳಿಗೆ ಪ್ರತಿಭಾವಂತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮದಡಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 5ನೇ ತರಗತಿಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ 6ನೇ ತರಗತಿಗೆ ಪ್ರವೇಶ ನೀಡಲು ಆನ್ಲೈನ್ ಮುಖಾಂತರ ನೊಂದಣಿ ಮಾಡಿಕೊಳ್ಳಲು ಇದೇ ಏಪ್ರಿಲ್ 15 ರಿಂದ ಮೇ 03 ರವರೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಆನ್ಲೈನ್ ನೊಂದಣಿ ಪ್ರಕ್ರಿಯೆಯು ಆಯಾ ತಾಲ್ಲೂಕಿನ ಸಹಾಯಕ ನಿರ್ದೇಶಕರು ಗ್ರೇಡ್–1 ಮತ್ತು 2 ಸಮಾಜ ಕಲ್ಯಾಣ ಇಲಾಖೆಯ ಕಛೇರಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಕಛೇರಿ ವೇಳೆಯಲ್ಲಿ ನೊಂದಣಿ ಮಾಡಲಾಗುವುದು. ಸಂಬಂಧಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ಫೋಷಕರು ಈ ಇಲಾಖಾ ಕಛೇರಿಗಳಲ್ಲಿ ಆನ್ಲೈನ್ ಮೂಲಕ ನೊಂದಣಿ ಮಾಡಿಸುವಂತೆ ಸೂಚಿಸಿದೆ. ಮೇ 03ರ ಕೊನೆಯ ದಿನಾಂಕ ಮುಗಿದ ನಂತರ ಬಂದಂತಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಷರತ್ತುಗಳು: ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ ಸೇರಿದ್ದು, ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.2.50 ಲಕ್ಷ (ಎರಡು ಲಕ್ಷದ ಐವತ್ತು ಸಾವಿರ) ಮೀರಿರಬಾರದು. ಪ್ರತಿಭಾವಂತ ವಿದ್ಯಾರ್ಥಿಯಾಗಿರಬೇಕು. 5ನೇ ತರಗತಿಯಲ್ಲಿ ಶೇ.60ರಷ್ಟು ಅಂಕ ಪಡೆದಿರಬೇಕು. ನಿಗಧಿಪಡಿಸಲಾದ ಗುರಿಯಲ್ಲಿ ಬಾಲಕಿಯರಿಗೆ ಶೇ50ರಷ್ಟು ಮೀಸಲಾತಿ ಇರುತ್ತದೆ. ಪ್ರತಿಷ್ಟಿತ ಶಾಲೆಗಳ ಆಯ್ಕೆ ಕೋರಿ ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು.
ಒಂದೇ ಕುಟುಂಬದಲ್ಲಿ ಇಬ್ಬರಿಗೆ ಒಬ್ಬ ಬಾಲಕ ಮತ್ತು ಒಬ್ಬ ಬಾಲಕಿ, ಬಾಲಕ ಇಲ್ಲದಿದ್ದಲ್ಲಿ ಇಬ್ಬರು ಬಾಲಕೀಯರಿಗೂ ಅಥವಾ ಬಾಲಕಿ ಇಲ್ಲದಿದ್ದಲ್ಲಿ ಇಬ್ಬರು ಬಾಲಕರಿಗೆ ಪ್ರವೇಶಾವಕಾಶ ಕಲ್ಪಿಸತಕ್ಕದ್ದು. ಫೋಷಕರು ನಿಗಧಿತ ಅರ್ಜಿಯೊಂದಿಗೆ 04 ಪಾರ್ಸ್ಫೋರ್ಟ್ ಸೈಜ್ ಭಾವಚಿತ್ರ, 5ನೇ ತರಗತಿಯ ಅಂಕಪಟ್ಟಿ (Progress card), , ಜಾತಿ ಮತ್ತು ಆದಾಯ ಪ್ರಮಾಣ ಪತ್ರ, (ತಂದೆ ಮತ್ತು ತಾಯಿ ಇಬ್ಬರ) ಆಧಾರ್ ಕಾರ್ಡ್ ಇತ್ಯಾದಿ ಅಗತ್ಯ ನಕಲು ದಾಖಲಾತಿಗಳೊಂದಿಗೆ ಸಲ್ಲಿಸುವುದು.
ಮಾರ್ಗಸೂಚಿಯನ್ವಯ ಬಡತನ ರೇಖೆಗಿಂತ ಕೆಳಗಿನ ಮಟ್ಟದ ಹಾಗೂ ಯೋಜನೆ ಸೌಲಭ್ಯಗಳನ್ನು ಪಡೆಯಲು ವಿಫಲರಾದವರು ಮತ್ತು ವಿಶೇಷ ಪ್ರಕರಣದ ಮೀಸಲಾತಿ ಬಯಸುವವರು. ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿದಂತಹ ಪೋಷಕರು, ಸರ್ಕಾರಿ ನೌಕರ ಪೋಷಕರು ಆನ್ಲೈನ್ನಲ್ಲಿ ಸುಳ್ಳು ದಾಖಲೆ ನೀಡಿರುವುದು ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳ ಆಯ್ಕೆಯನ್ನು ಯಾವ ಸಂದರ್ಭದಲ್ಲಿಯಾದರೂ ರದ್ದುಪಡಿಸುವ ಅಧಿಕಾರವನ್ನು ಆಯ್ಕೆ ಪ್ರಾಧಿಕಾರ ಹೊಂದಿರುತ್ತದೆ ಹಾಗೂ ಅಂತಹ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ತಿಳಿಸಿದ್ದಾರೆ.