ಚಿತ್ರದುರ್ಗ ಜಿಲ್ಲೆಯ ಹಲವು ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸದುರ್ಗ ತಾಲ್ಲೂಕು ಶ್ರೀರಾಂಪುರ ಹೋಬಳಿ ಶ್ರೀರಾಂಪುರ ಹಾಗೂ ಕುರುಬರಹಳ್ಳಿ ಕಂದಾಯ ವೃತ್ತಕ್ಕೆ ಮತ್ತು ಕಸಬಾ ಹೋಬಳಿ ಹುಣವಿನಡು ಕಂದಾಯ ವೃತ್ತಕ್ಕೆ ಹೆಚ್ಚುವರಿ ಗ್ರಾಮ ಸಹಾಯಕರ ಹುದ್ದೆಗೆ  ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಕಡೆಯ ದಿನಾಂಕದಂದು 25 ವರ್ಷ  ಪೂರ್ಣಗೊಂಡಿರಬೇಕು. 45ವರ್ಷ ವಯೋಮಿತಿ ಒಳಗಿರಬೇಕು.. ಎಸ್ಎಸ್ಎಲ್ಸಿ, ವರ್ಗಾವಣೆ ಪ್ರಮಾಣ ಪತ್ರ, ಶಾಲಾ  ದಾಖಲಾತಿ ಪ್ರಮಾಣ ಪತ್ರದಲ್ಲಿ ದಾಖಲಿಸಿರುವ ಜನ್ಮ ದಿನಾಂಕವನ್ನು ಮಾತ್ರವೇ ಪರಿಗಣಿಸಲಾಗುವುದು. ಅಭ್ಯರ್ಥಿಯು ಕನ್ನಡ ಓದುವ, ಬರೆಯುವ  ಜ್ಞಾನವುಳ್ಳ ಅಕ್ಷರಸ್ಥರಾಗಿರುವ  ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿಯನ್ನು ನಿಗಧಿತ ನಮೂನೆ1ರಲ್ಲಿ ಸಲ್ಲಿಸಬೇಕು. ಗ್ರಾಮ ಸಹಾಯಕ ಹುದ್ದೆಯ ತಾತ್ಕಾಲಿಕ ಹುದ್ದೆಯಾಗಿದ್ದು, ಸರ್ಕಾರದಿಂದ ಕಾಲಕಾಲಕ್ಕೆ  ನಿಗಧಿ ಆಗುವಂತಹ ಗೌರವಧನ ಪಾವತಿಸಲಾಗುವುದು.

  ಗ್ರಾಮ ಸಹಾಯಕ ಹುದ್ದೆ ನೇಮಕಾತಿಗಾಗಿ ಹಿಂದೆ ಕಂದಾಯ ವೃತ್ತಕ್ಕೆ ಸೇರಿದ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸಿದ ಕೆಳಮಟ್ಟದ ಗ್ರಾಮ ನೌಕರರ ವಂಶಸ್ಥರಿಗೆ ಆದ್ಯತೆ ನೀಡಲಾಗುವುದು. ಕೆಳಮಟ್ಟದ ನೌಕರರ ವಂಶಸ್ಥರೆಂಬುವ ಬಗ್ಗೆ ಸೂಕ್ತ ದಾಖಲೆ ಲಗತ್ತಿಸುವುದು. ತಳವಾರ, ತೋಟಿಗಳು, ನೀರಗಂಟಿಗಳು, ವಾಲೀಕರ, ಮಹರ್ಸ್, ಬರ್ಕರ್ಸ್, ನೀರಾಡಿಗಳು, ಬುಲಾತಿದರ್ಸ್, ವೆಟ್ಸಿ, ಊರ ಗಾನಿಸ್ಸ್, ಕುಳವಾಡಿಕೆ ಕುಟುಂಬದವರಿಗೆ ಮೊದಲ ಆದ್ಯತೆ ನೀಡುವುದು.  

ಒಂದು ವೇಳೆ ವರ್ಗದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಇತರೆ ವರ್ಗದ ಅಭ್ಯರ್ಥಿಗಳಿಗೆ ಪರಿಗಣಿಸಲಾಗುವುದು. ಗ್ರಾಮ ಸಹಾಯಕ ಹುದ್ದೆಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಮೊದಲಿಗೆ ಮೀಸಲಾತಿಯನ್ನು ಪರಿಗಣಿಸಲಾಗುವುದು. ನಂತರ ವಿದ್ಯಾರ್ಹತೆಯ ಮಾನದಂಡತೆಯ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ ಮತ್ತು ಹೆಚ್ಚಿನ ಅಂಕಗಳಿಸಿರುವ ಅಭ್ಯರ್ಥಿಯನ್ನು ಪರಿಗಣಿಸಲಾಗುವುದು. ಗ್ರಾಮ ಸಹಾಯಕನು ಗ್ರಾಮ ಆಡಳಿತ ಅಧಿಕಾರಿಗೆ ಎಲ್ಲ ಕೆಲಸ ಕಾರ್ಯಗಳಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸಬೇಕಿರುತ್ತದೆ.

ಗ್ರಾಮ ಸಹಾಯಕರಿಗೆ ಕೂಡಾ ಕಂಪ್ಯೂಟರ್ ತಂತ್ರಾಂಶದ ಜ್ಞಾನ ಹೊಂದಿರುವ ಅವಶ್ಯಕತೆ ಇರುತ್ತದೆ. ಅಭ್ಯರ್ಥಿಗಳು ಅರ್ಜಿಯೊಂದಿಗೆ ಎಲ್ಲಾ ಪ್ರಮಾಣ ಪತ್ರಗಳು ಮತ್ತು ಅಂಕಪಟ್ಟಿಗಳನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರಬೇಕು. ತಹಶೀಲ್ದಾರ್ ಅವರಿಂದ ನಿಗಧಿತ ಅವಧಿಯೊಳಗೆ ಪಡೆದ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಲಗತ್ತಿಸುವುದು. ಅಭ್ಯರ್ಥಿಯು ಕಂದಾಯ ವೃತ್ತದ ವ್ಯಾಪ್ತಿಯ ಖಾಯಂ ನಿವಾಸಿ ಆಗಿರಬೇಕು. ಸ್ಥಳೀಯ ವಾಸಿ ಎಂಬುದರ ನಿಖರತೆಗಾಗಿ ಪಡಿತರ ಚೀಟಿ ನಕಲು, ಸ್ಥಳೀಯ ಅಭ್ಯರ್ಥಿ ಎಂಬ ಬಗ್ಗೆ ದೃಢೀಕರಣ, ವಂಶವೃಕ್ಷ ಪಡೆದು ಸಲ್ಲಿಸುವುದು.

ಗ್ರಾಮ ಸಹಾಯಕರು ಚುನಾಣೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಲ್ಲಿ ದೈಹಿಕ ಶ್ರಮವಹಿಸಿ ಕಾರ್ಯನಿರ್ವಹಿಸಬೇಕಿರುವುದರಿಂದ ದೈಹಿಕವಾಗಿ ಸಶಕ್ತವಾಗಿರುವ ಅವಶ್ಯಕತೆ ಇರುವುದರಿಂದ ಅಭ್ಯರ್ಥಿಯು ದೈಹಿಕ ಶ್ರಮಿಕ ಕೆಲಸ ನಿರ್ವಹಿಸಲು ಸದೃಢವಾಗಿರುವ ಬಗ್ಗೆ ಸ್ಥಳೀಯ ಸರ್ಕಾರಿ ವೈದ್ಯರಿಂದ ದೈಹಿಕ ಧೃಢತೆ ವೈದ್ಯಕೀಯ ಪ್ರಮಾಣ ಪತ್ರ ಪಡೆದು ಸಲ್ಲಿಸುವುದು. ಅಭ್ಯರ್ಥಿಯು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತನಾಗಿರಬೇಕು.

ನೇಮಕಾತಿ ಹೊಂದುವ ಹುದ್ದೆಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನು ಉಂಟು ಮಾಡುವ ಸಂಭವವಿರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತನಾಗಿರಬೇಕು. ಅಭ್ಯರ್ಥಿಯು ಯಾವುದೇ ಕ್ರಿಮಿನಲ್ ಪ್ರಕರಣ ಹಿನ್ನಲೆಯುಳ್ಳವರಾಗಿರಬಾರದು. ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆಯಿಂದ ದೃಢೀಕರಣ ಪತ್ರ ಪಡೆದು ಲಗತ್ತಿಸುವುದು. ಅಭ್ಯರ್ಥಿಯ ಅರ್ಹತೆಯ ಆಧಾರದ ಮೇಲೆ ಸಂದರ್ಶನ ನಡೆಸಿ ಅಂತಿಮಗೊಳಿಸಲಾಗುವುದು. ನೇಮಕಾತಿ ಬಗ್ಗೆ ಅಂತಿಮ ತೀರ್ಮಾನವನ್ನು ನೇಮಕಾತಿ ಪ್ರಾಧಿಕಾರವು ಹೊಂದಿರುತ್ತದೆ. ಹಾಗೂ ನೇಮಕಾತಿಯು ಮೇಲ್ಮನವಿ ಪ್ರಾಧಿಕಾರಗಳಾದ ಸರ್ಕಾರ ಹಾಗೂ ನ್ಯಾಯಾಲಯಗಳ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೊಸದುರ್ಗ ತಾಲ್ಲೂಕು ತಹಶೀಲ್ದಾರ್ ತಿಳಿಸಿದ್ದಾರೆ.

 

 

Share This Article
error: Content is protected !!
";