ಹೆಚ್.ಸಿ ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ವೇಣುಕಲ್ಲುಗುಡ್ಡದ ಶ್ರೀ ಗುರು ಹಾಲಪ್ಪಯ್ಯಸ್ವಾಮಿ ಮಠದ ಶ್ರೀ ಚಂದ್ರಶೇಖರಯ್ಯ ಸ್ವಾಮಿಗಳ ನೇತೃತ್ವದಲ್ಲಿ ಆವಿನ ಕಾಮರಾಯನ ಹರಿಯಬ್ಬೆ ಕಟ್ಟೆಮನೆಗೆ ಸೇರಿದ ಶ್ರೀ ಅಮ್ಮಾಜಿ ಏಳುಮಂದಿ ಅಕ್ಕಗಳ ಜಲಧಿ ಪೂಜಾ ಮಹೋತ್ಸವ ಮತ್ತು ಪೂಜಾರಿಕೆ ಪಟ್ಟದ ಕಾರ್ಯಕ್ರಮವನ್ನು ಏಪ್ರಿಲ್ 30 ರಿಂದ ಮೇ-1ರವರೆಗೆ ಏರ್ಪಡಿಸಲಾಗಿದೆ.
ಆವಿನ ಕಾಮರಾಯನ ಹರಿಯಬ್ಬೆ ಮೂಲ ಕಟ್ಟೆಮನೆಗೆ ಸೇರಿದ ಹರಿಯಬ್ಬೆ, ಮಂಗಳವಾಡ, ಮಧುಗಿರಿ, ಬರಗೂರು ಈ ನಾಲ್ಕೂ ಗುಡಿಕಟ್ಟಿಗೆ ಸೇರಿದ ಗುರುಗಳು, ಪೂಜಾರಿಗಳು, ಯಜಮಾನರು, ಬಂಡಿಕಾರರು, ಕೋಲುಕಾರರು, ದಳವಾಯಿಗಳು, ಯಳವರು, ಛಲವಾದಿಗಳ ಸಮ್ಮುಖದಲ್ಲಿ ಎಲ್ಲಾ ಅಣ್ಣ-ತಮ್ಮಂದಿರುಗಳು, ಕಾಬುದಾರಿಗಳು, ನೆಂಟರು ಹಾಗೂ ಸಮಸ್ತ ಭಕ್ತಾಧಿಗಳು ಸೇರಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.
ಏಪ್ರಿಲ್-30ರ ಬುಧವಾರ ಬೆಳಗಿನ ಜಾವ 4 ಶ್ರೀ ಅಮ್ಮಾಜಿ ಏಳುಮಂದಿ ಅಕ್ಕಗಳ ಜಲಧಿ ಮಹೋತ್ಸವ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮೇ-01ರ ಗುರುವಾರ ಬೆಳಿಗ್ಗೆ 9.30 ರಿಂದ 10.30ರವರೆಗೆ ಶ್ರೀ ಅಮ್ಮಾಜಿ ಏಳುಮಂದಿ ಅಕ್ಕಗಳ ಪೂಜಾರಿಕೆ ಪಟ್ಟವನ್ನು ಶಿರಾ ತಾಲೂಕಿನ ಬಡಮಾರನಹಳ್ಳಿ ಗ್ರಾಮದ ವಾಸಿ ಸಿದ್ದೇಶ್ ಅವರ ಜೇಷ್ಠ ಪುತ್ರ ಶ್ರೀ ಭುವನ್ ಎಂಬ ವಟುವಿಗೆ ಪೂಜಾರಿಕೆ ಪಟ್ಟ ಕಟ್ಟಿ ದೇವರ ಉತ್ಸವಾದಿ ಕಾರ್ಯಗಳನ್ನು ನೆರವೇರಿಸಲಾಗುತ್ತದೆ.
ಆವಿನ ಕಾಮರಾಯನ ಹರಿಯಬ್ಬೆ ಕಟ್ಟೆಮನೆಯ ಗುಡಿಕಟ್ಟಿಗೆ ಸೇರಿದ ಎಲ್ಲಾ ಅಣ್ಣ-ತಮ್ಮಂದಿರುಗಳು ಸಕಾಲಕ್ಕೆ ಆಗಮಿಸಿ, ದೇವರ ಜಲಧಿ ಮತ್ತು ಪೂಜಾರಿಕೆ ಪಟ್ಟ ಕಟ್ಟುವ ಕಾರ್ಯದಲ್ಲಿ ಭಾಗವಹಿಸಿ ಸಹಕರಿಸಿ ಶ್ರೀ ಅಮ್ಮಾಜಿ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ಕೋರಿದ್ದಾರೆ.
ಈ ಮಹತ್ವದ ಕಾರ್ಯವನ್ನು ಆವಿನ ಕಾಮರಾಯನ ಹರಿಯಬ್ಬೆ ಕಟ್ಟೆಮನೆಗೆ ಸೇರಿದ ಗುರುಗಳು, ಪೂಜಾರಿಗಳು, ಯಜಮಾನರು ಮತ್ತು ಎಲ್ಲಾ ಬಂಡಿಕಾರರು ಹಾಗೂ ಬಗಲ್‌ದಾರ್ ಬಂಡಿಯ ಯಜಮಾನರು, ಬಂಡಿಕಾರರು, ಗುಡಿಕಟ್ಟಿಗೆ ಸೇರಿದ ಅಣ್ಣ-ತಮ್ಮಂದಿರು, ಭಕ್ತಾಧಿಗಳು ನಡೆಸಿಕೊಡಲಿದ್ದಾರೆ.
ಕುಳ ಒಂದಕ್ಕೆ 1001 ರೂ.ಹಣವನ್ನು ಬಂಡಿಕಾರರಿಗೆ ಕೊಟ್ಟು ರಸೀದಿ ಪಡೆಯಬೇಕು. 2 ಸೇರು ಅಕ್ಕಿ ಒಂದು ಪಾವು ಬೇಳೆ, ಬೆಲ್ಲವನ್ನು ಮೀಸಲು ತಂದು ದೇವಸ್ಥಾನದಲ್ಲಿ ಒಪ್ಪಿಸಬೇಕು. ಜಲಧಿ ಮತ್ತು ಪಟ್ಟಾಭಿಷೇಕದ ದಿನಗಳಂದು ಅನ್ನಸಂತರ್ಪಣೆ ಇರುತ್ತದೆ ಎಂದು ಗುಡಿಕಟ್ಟಿನ ಗುರುಗಳು, ಯಜಮಾನರು, ಬಂಡಿಕಾರರು, ಅಣ್ಣ-ತಮ್ಮಂದಿರು ಹಾಗೂ ಕಾಬುದಾರಿಗಳು ತಿಳಿಸಿದ್ದಾರೆ.
ಅಮ್ಮಾಜಿ ಎಂದೆ ಪ್ರಸಿದ್ಧಿ: ಅಮ್ಮಾಜಿ ಎಂದೆ ಪ್ರಸಿದ್ಧವಾಗಿರುವ ಶ್ರೀ ಏಳು ಮಂದಿ ಅಕ್ಕಗಳು ಅಥವಾ ಏಳು ಮಂದಕ್ಕ ದೇವಿಯ ದೇವಾಲಯವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿದೆ.
ಕುಂಚಿಟಿಗ ಆವಿನವರ ಮೂಲ ಕಟ್ಟೆಮನೆ ಹರಿಯಬ್ಬೆ ಗ್ರಾಮದಲ್ಲಿದೆ. ಆವಿನವರ 36 ಬಂಡಿಗಳ ಮೂಲ ಪುರುಷ ಆವಿನ ಕಾಮರಾಯರು. ಇದೇ ಗ್ರಾಮದಲ್ಲಿ ಜೀವ ಸಮಾಧಿಯಾಗಿದ್ದಾರೆ.
ಆವಿನವರ ಕಳ್ಳು ಬಳ್ಳಿಗಳ ಅಮಾವಾಸ್ಯೆ ದೇವರಾದ ಏಳು ಮಂದಕ್ಕೆ ಉರಾಫ್ ಅಮ್ಮಾಜಿ ದೇವಾಲಯಕ್ಕೆ ಸುಮಾರು 900 ವರ್ಷಗಳ ಪುರಾತನ ಇತಿಹಾಸವಿದೆ.
ಈ ದೇವಾಸ್ಥಾನದಲ್ಲಿ ಪ್ರತಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯುತ್ತವೆ. ಜೊತೆಗೆ ಪ್ರತಿ ವರ್ಷ ಯುಗಾದಿ ಹಬ್ಬದ ನಂತರ ಬರುವ ಶ್ರೀರಾಮ ನವಮಿ ದಿನದೊಂದು ಮಾತ್ರ ಅಮ್ಮಾಜಿ ಏಳು ಮಂದಕ್ಕ ದೇವಿಯನ್ನು ಜಲ್ದಿ ಅಂದರೆ ಹೊಳೆ ಪೂಜೆಗೆ ಕರೆದೊಯ್ಯಲಾಗುತ್ತದೆ. ಹರಿಯಬ್ಬೆ ಗ್ರಾಮದಿಂದ ಸಮಾರು 1 ರಿಂದ 2 ಕಿಲೋ ಮೀಟರ್ ದೂರದಲ್ಲಿರುವ ಹಳ್ಳದಲ್ಲಿ ವಿಶೇಷವಾದ ಜಲ್ದಿ ಪೂಜೆ ರಾಮನವಮಿ ದಿನ ನಡೆಯುತ್ತದೆ.
ಹರಿಯಬ್ಬೆ ಗ್ರಾಮ, ಚಿತ್ರದುರ್ಗ, ತುಮಕೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆವಿನ ಕಾಮರಾಯರ ಬಂಡಿಕಾರರು, ಕುಲ ಬಳ್ಳಿಗಳ ನೂರಾರು ಮನೆಗಳಿವೆ. ಅಲ್ಲದೆ ಅಮ್ಮಾಜಿ ಏಳು ಮಂದಕ್ಕ ದೇವಿಯ ದೇವಸ್ಥಾನದಲ್ಲೂ ಪುರಾತನ ಕಾಲದ ಬಂಡಿ ಇದೆ. ದೇವಿಯ ಗರ್ಭ ಗುಡಿಯೊಳಗೆ ಬೃಹತ್ ಪ್ರಮಾಣದ ಹುತ್ತವೊಂದು ಬೆಳೆದು ನಿಂತಿದೆ. ಈ ದೇವಿ ರೂಪವೇ ಪಟ್ಟಿಗೆಕಾರದಲ್ಲಿದ್ದು ಸರ್ಪ ರೂಪಿ ದೇವಿಯಾಗಿದೆ. ಇಂದಿಗೂ ಪುರಾತನ ಕಾಲದ ಬಂಡಿಗಳು ಕಾಣಸಿಗುತ್ತವೆ.
ಹರಿಯಬ್ಬೆ ಗ್ರಾಮಕ್ಕೆ ಹೋಗುವ ಮಾರ್ಗ:
ಹಿರಿಯೂರಿನಿಂದ 27 ಕೀ.ಮೀ ದೂರದಲ್ಲಿ (ಹಿರಿಯೂರು-ಧರ್ಮಪುರ-ಅಮರಾಪುರ ರಸ್ತೆ), ಶಿರಾ ದಿಂದ ಚಂಗಾವರ ಮಾರ್ಗವಾಗಿ, ಶಿರಾದಿಂದ ಲಕ್ಕನಹಳ್ಳಿ ಮಾರ್ಗವಾಗಿ ಧರ್ಮಪುರದ ಮೂಲಕ ಹರಿಯಬ್ಬೆ ಗ್ರಾಮಕ್ಕೆ ತಲುಪಬಹುದು. ಅಲ್ಲದೆ ಚಳ್ಳಕೆರೆ-ಪರಶುರಾಂಪುರ-ಧರ್ಮಪುರ ಮಾರ್ಗವಾಗಿಯೂ ಹರಿಯಬ್ಬೆ ಗ್ರಾಮದ ಮೂಲ ಕಟ್ಟೆಮನೆ ಇರುವ ಕಾಮರಾಯರ ಗುಡಿ ಮತ್ತು ಅಮಾವಾಸ್ಯೆ ದೇವತೆ ಅಮ್ಮಾಜಿ ಏಳು ಮಂದಕ್ಕ ದೇವಾಲಯ ತಲುಪಬಹುದಾಗಿದೆ.
ಜಲ್ದಿ ಉತ್ಸವ:
ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ಕಟ್ಟೆಮನೆ ಹಾಗೂ ಅಮಾವಾಸ್ಯೆ ಗುಡಿಕಟ್ಟಿಗೆ ಸೇರಿದ ಇತಿಹಾಸ ಪ್ರಸಿದ್ಧ ಬುಡಕಟ್ಟು ಸಂಸ್ಕೃತಿಯ ಆವಿನ ಕಾಮರಾಯ ಮತ್ತು ಶಿಲ್ಪಿರಾಯರ ವಂಶಸ್ಥರ ಗುಂಪಿನ ಸಹೋದರರು ಹರಿಯಬ್ಬೆ ಶ್ರೀಅಮ್ಮಾಜಿ ಏಳುಮಂದಕ್ಕ ದೇವಿ ಜಲಧಿ ಉತ್ಸವವವನ್ನು ಪ್ರತಿ ವರ್ಷ ಶ್ರೀರಾಮ ನವಮಿ ದಿನದೊಂದು ಬೆಳಗಿನ ಜಾವ 4 ಗಂಟೆಗೆ ನಡೆಸಲಿದ್ದಾರೆ. ಅದರ ಪ್ರಯುಕ್ತ ಪ್ರಸಕ್ತ ಸಾಲಿನಲ್ಲಿ ದೇವರ ಪಟ್ಟದ ಪೂಜಾರಿಯ ಪಟ್ಟಾಭಿಷೇಕ ಕಾರ್ಯಕ್ರಮ ಇದ್ದುದರಿಂದ ಜಲ್ದಿ ಉತ್ಸವವನ್ನು ಮುಂದೂಡಿ ಈಗ ಏಪ್ರಿಲ್-30ರಂದು ಹಮ್ಮಿಕೊಳ್ಳಲಾಗಿದೆ.
ರಾಮ ನವಮಿಯಲ್ಲಿ ಮಾತ್ರ ಏಳುಮಂದಕ್ಕೆ ದೇವಿಯನ್ನು ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿ ಹೊಳೆ(ಹಳ್ಳ)ದಲ್ಲಿ ವಿಶೇಷವಾಗಿ ಜಲಧಿ ಪೂಜೆ ಮಾಡಿಸುವುದು ವಿಶೇಷ.
ವೇಣುಕಲ್ಲುಗುಡ್ಡದ ಶ್ರೀಹಾಲಪ್ಪಯ್ಯಸ್ವಾಮಿ ಗುರುಪೀಠದ ವಿ.ಎಂ.ಚಂದ್ರಶೇಖರಯ್ಯಸ್ವಾಮಿ, ಆವಿನ ಕಾಮರಾಯ ಸಂತತಿಯ 18 ಬಂಡಿ ಯಜಮಾನರು, 11 ಬಂಡಿಗಳ ಯಜಮಾನರು, ಶಿಲ್ಪಿರಾಯ ಸಂತತಿಯ ಭಾಗಲ್ದಾರ ಬಂಡಿ ಯಜಮಾನರು, ಹರಿಯಬ್ಬೆ ಕಟ್ಟೆಮನೆಯ 18 ಬಂಡಿಕಾರರು, ಕೋಲ್ಕಾರರು, ಕಂಬಿಕಾರರು, ಪೂಜಾರರು, ಹರಿಯಬ್ಬೆ ಅಮಾವಾಸ್ಯೆ ಏಳುಮಂದಕ್ಕ, ಪಾವಗಡ ತಾಲೂಕಿನ ಮಂಗಳವಾಡ ಅಕ್ಕಮ್ಮದೇವಿ, ಮಧುಗಿರಿ ತಾಲೂಕಿನ ಸಿದ್ದಾಪುರ ಚೋಳೇಶ್ವರಸ್ವಾಮಿ, ಶಿರಾ ತಾಲೂಕಿನ ಬರಗೂರು ಈರಮ್ಮಾಜಿ ಅಮಾವಾಸ್ಯೆಗಳ ಕುಲವಳಿಗಳು, ನೆಂಟರು, 12 ಜನ ಕೈವಾಡಸ್ಥರು ಸೇರಿ ಜಲ್ದಿ ಉತ್ಸವ ಆಚರಿಸುತ್ತಾರೆ.
ಈ ಸಂದರ್ಭದಲ್ಲಿ ಜಲ್ದಿ ಪೂಜೆಯ ನಂತರ ದೇವಿಗೆ 101 ಎಡೆ ಹಾಕಲಾಗುತ್ತದೆ. ಎಡೆ ಬಾಬ್ತಿನ ಹಕ್ಕುದಾರರು, ಆವಿನ ಕಾಮರಾಯರ ವಂಶಸ್ಥರ ಸಮ್ಮುಖದಲ್ಲಿ ಕಟ್ಟು ನಿಟ್ಟಿನ ವಿಧಿ ವಿಧಾನಗಳ ಮೂಲಕ ಬುಡಕಟ್ಟು ಜಲಧಿ ಉತ್ಸವ ನಡೆಯಲಿದೆ.