ಚಂದ್ರವಳ್ಳಿ ನ್ಯೂಸ್, ಮಂಗಳೂರು:
ನೂರಾರು ಕೋಟಿ ರೂ. ಹೂಡಿಕೆ ವಂಚನೆ ಮಾಡಿರುವ 11 ಮಂದಿಆರೋಪಿಗಳನ್ನು ಮಂಗಳೂರು ಸಿಇಎನ್ ಕ್ರೈಂ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಪೊಲೀಸರು ಎಲ್ಲಾ ಆರೋಪಿಗಳನ್ನೂ ನೇಪಾಳದಲ್ಲಿ ಬಂಧಿಸಲಾಗಿದೆ.
ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ಕೋಟ್ಯಾಂತರ ರೂ.ವಂಚಿಸಿರುವ ಗುಜರಾತ್ ರಾಜ್ಯದ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳ ಕೊಲ್ಕತ್ತಾದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಾಂಡ್ನ ಪುಪ್ಲ ಶಿವಕುಮಾರ್ ರಾವ್ (32), ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24), ಹರ್ಷ್ ಮಿಶ್ರಾ (22), ಮೊಹಮ್ಮದ್ ಆಕೀಬ್ ಅಲಿ (27), ನೌಶಾದ್ ಅಲಿ (34), ಬಿಹಾರದ ನಳಂದ ಜಿಲ್ಲೆಯ ರಾಜೀವ್ ರಂಜನ್ ಕುಮಾರ್ (30), ರಾಜಸ್ಥಾನದ ಜೈಪುರ್ ಜಿಲ್ಲೆಯ ಓಂ ಪ್ರಕಾಶ್ ಯಾದವ್ (37) ಬಂಧಿತ ಆರೋಪಿಗಳಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೀನಾ ಪ್ರಜೆಗಳಿದ್ದರು ಎನ್ನಲಾಗಿದೆ. ನೇಪಾಳ ಪೊಲೀಸರು ಚೈನಾದ ವಂಚಕರನ್ನು ದಸ್ತಗಿರಿ ಮಾಡಿದ್ದಾರೆ. ಅಲ್ಲದೆ, ಐವರು ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿತರ ಮೊಬೈಲ್ ಫೋನ್ಗಳು ಹಾಗೂ ಲ್ಯಾಪ್ಟಾಪ್ಗಳನ್ನು ಪರಿಶೀಲಿಸಿದಾಗ, ಒಟ್ಟು 624 ಬ್ಯಾಂಕ್ ಖಾತೆಗಳ ವಿವರಗಳು ಕಂಡುಬಂದಿದೆ. ಈ ಬ್ಯಾಂಕ್ ಖಾತೆಗಳ ಮೇಲೆ ಒಟ್ಟು 4,580ಕ್ಕೂ ಅಧಿಕ ಪ್ರಕರಣಗಳು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ನಲ್ಲಿ ದಾಖಲಾಗಿವೆ.
ಇದರಲ್ಲಿ ಒಂದು ಬ್ಯಾಂಕ್ ಖಾತೆಯಲ್ಲಿ 167 ಕೋಟಿ ಹಣ ವರ್ಗಾವಣೆಯಾಗಿದೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚಕರು ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ಸುಮಾರು 30,70,26,725 ರೂ. ಹಣ ವರ್ಗಾವಣೆ ಆಗಿರುವುದು ಕಂಡುಬಂದಿದೆ. ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಲ್ಯಾಪ್ ಟಾಪ್, 21 ಮೊಬೈಲ್ ಫೋನ್ಗಳು, 20 ವಿವಿಧ ಕಂಪನಿಯ ಸಿಮ್ ಕಾರ್ಡ್ಗಳು, 20 ವಿವಿಧೆ ಬ್ಯಾಂಕ್ ಡೆಬಿಟ್ ಕ್ರೆಡಿಟ್ ಕಾರ್ಡ್ಗಳನ್ನು ಬಂಧಿತ ಆರೋಪಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

