ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ನಗರದ ಮಾದನಾಯಕನಹಳ್ಳಿ ಸಮೀಪ ಪ್ರತಿಷ್ಠತ ಕಂಪನಿಗಳ ಬಟ್ಟೆಗಳನ್ನು ನಕಲಿ ಮಾಡಿ ತಯಾರಿಸುತ್ತಿದ್ದ ಘಟಕದ ಮೇಲೆ ಪೊಲೀಸರು ದಾಳಿ ಮಾಡಿ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸರು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಲೇಬಲ್ ಬಳಕೆ ಮಾಡಿ ನಕಲಿ ಸಿದ್ಧ ಉಡುಪು ತಯಾರಿಕೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ ನಡೆಸಿದ್ದಾರೆ.
ಸುಮಾರು 40 ಲಕ್ಷ ರೂ. ಮೌಲ್ಯದ ನಕಲಿ ಬ್ರ್ಯಾಂಡೆಡ್ ಬಟ್ಟೆಗಳನ್ನು ದಾಳಿ ವೇಳೆ ಪೊಲೀಸರು ಪತ್ತೆ ಮಾಡಿ ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬ್ರ್ಯಾಂಡ್ ಕಂಪನಿಯ ರಾಯಭಾರಿ ಸಂಸ್ಥೆಯಾಗಿರುವ ಅನ್ವೇಶ್ ಐಪಿಆರ್ ಸಂಸ್ಥೆ ಮಾಹಿತಿ ಕಲೆಹಾಕಿ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿತ್ತು. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ತೋಟದ ಗುಡ್ಡದಹಳ್ಳಿಯಲ್ಲಿ ಆಶ್ರಫ್, ಶರ್ಪುದ್ದೀನ್ ಮತ್ತು ಸರವಣ ಎಂಬುವವರು ನಕಲಿ ಗಾರ್ಮೆಂಟ್ ಫ್ಯಾಕ್ಟರಿ ನಡೆಸುತ್ತಿದ್ದರು.
ಈ ನಕಲಿ ಬ್ರ್ಯಾಂಡ್ನ ಗಾರ್ಮೆಂಟ್ಗಳನ್ನು ಅಸಲಿ ಬ್ರಾಂಡ್‌ಗಳೆಂದು ಬಿಂಬಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.