ಮಾಜಿ ಸಚಿವರ ಮನೆಯಲ್ಲಿ ಕಳ್ಳತನ ಮಾಡಿದ್ದ ಅಂತಾರಾಷ್ಟ್ರೀಯ ಕಳ್ಳರ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ದಿ|ಮಾಜಿ ಸಚಿವ ಗೋವಿಂದೇಗೌಡ ಅವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಅಂತಾರಾಷ್ಟ್ರೀಯ ಕಳ್ಳರನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಪ್ಪ ತಾಲೂಕಿನಲ್ಲಿರುವ ಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ನೇಪಾಳಿ ಮೂಲದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಂದೂವರೆ ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಾರು ಸೇರಿದಂತೆ ಅಂದಾಜು ಒಟ್ಟು 1.75 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement - 

ಆ.21 ರಂದು ಬೆಳಗಿನ ಜಾವ 02.55ರ ಗಂಟೆ ಸುಮಾರಿಗೆ ಕೊಪ್ಪ ಪೊಲೀಸ್​​​​​ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್​ನ, ಮಾಜಿ ಸಚಿವ ಗೋವಿಂದೇಗೌಡರ ಪುತ್ರ ಹಾಗೂ ಎಸ್ಟೇಟ್ ಮಾಲೀಕ ಹೆಚ್​.ಜಿ. ವೆಂಕಟೇಶ್ ಮನೆಯಲ್ಲಿ 6 ಲಕ್ಷ ನಗದು ಮತ್ತು 37.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು.

ಕೊಪ್ಪ ಪೊಲೀಸ್​ ಠಾಣೆಯಲ್ಲಿ ಗೋವಿಂದೇಗೌಡರ ಪುತ್ರ ವೆಂಕಟೇಶ್​ ಪ್ರಕರಣ ದಾಖಲು ಮಾಡಿದ್ದರು. ಕೂಡಲೇ ಆರೋಪಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕ್ರಂ ಅಮಟೆಯವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಟಿ. ಜಯಕುಮಾರ್ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದರು.

- Advertisement - 

ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ಸಾಂಗ್ಲಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ನೇಪಾಳದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್​, ಕರಂ ಸಿಂಗ್​ ಬಹಾದ್ದೂರ್​ ಎಂಬುವರನ್ನು ವಶಕ್ಕೆ ಪಡೆದು ಅಂದಾಜು 1.50 ಕೋಟಿ ಮೌಲ್ಯದ 1 ಕೆ.ಜಿ. 800 ಗ್ರಾಂ.ತೂಕದ ಚಿನ್ನ, 1 ಕೆಜಿ 200 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ (ಎರಡು ಕಾರುಗಳ ಬೆಲೆ 25 ಲಕ್ಷ ಆಗಿದ್ದು) ಅಂದಾಜು ಒಟ್ಟು 1.75 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ವಶದಲ್ಲಿಟ್ಟುಕೊಂಡು ಇನ್ನು ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ ಎಂದು ಜಿಲ್ಲಾ ಎಸ್​ಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

 

 

 

 

Share This Article
error: Content is protected !!
";