ವೈದ್ಯ ಆನಂದ್ ಕೊಲೆ ಆರೋಪಿಗಳ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಳೆದ
7 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಆಯುರ್ವೇದ ವೈದ್ಯನ ನಾಪತ್ತೆ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದು ಜಮೀನು ಮಾರಾಟದ ಹಣದ ಆಸೆಗಾಗಿ ಮಧ್ಯವರ್ತಿಗಳು ಹತ್ಯೆ ಮಾಡಿದ್ದ ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೈದ್ಯ ಆನಂದ್(44) ಅವರನ್ನು ಕತ್ತು ಬಿಗಿದು ಹತ್ಯೆ ಮಾಡಿ ಮೈಸೂರು ಜಿಲ್ಲೆಯ ಲಕ್ಷ್ಮಣ ತೀರ್ಥ ಹಿನ್ನೀರಿನಲ್ಲಿ ಎಸೆದಿದ್ದ ಆರೋಪದಡಿ ಮಧ್ಯವರ್ತಿಗಳಾದ ಮೊಹಮ್ಮದ್ ಗೌಸ್ (31), ನದೀಂ ಪಾಷಾ (32) ಹಾಗೂ ಸೈಯ್ಯದ್ ನೂರ್ ಪಾಷಾ (39) ಎನ್ನುವ ಆರೋಪಿಗಳನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಘಟನೆ?:
ಬೆಂಗಳೂರಿನ ಜಯನಗರ
7ನೇ ಬ್ಲಾಕ್‌ ನಿವಾಸಿ ವೈದ್ಯ ಆನಂದ್ ಅವರ ಮನೆಯನ್ನು ಮಧ್ಯವರ್ತಿಗಳಾದ ಮೊಹಮ್ಮದ್ ಗೌಸ್ (31), ನದೀಂ ಪಾಷಾ (32) ಹಾಗೂ ಸೈಯ್ಯದ್ ನೂರ್ ಪಾಷಾ (39) ಎನ್ನುವವರು 90 ಲಕ್ಷ ರೂಪಾಯಿಗೆ ಪ್ರಸಾದ್ ಎಂಬುವವರಿಗೆ ಮಾರಾಟ ಮಾಡಿಸಿದ್ದರು. ಆ ವ್ಯವಹಾರದಲ್ಲಿ ಆನಂದ್ ಅವರಿಗೆ ಬಂದಿದ್ದ 45 ಲಕ್ಷ ರೂ. ಮುಂಗಡ ಹಣದಲ್ಲಿ ಮಧ್ಯವರ್ತಿಗಳು 33 ಲಕ್ಷ ರೂ. ಹಂಚಿಕೊಂಡಿದ್ದರು ಎನ್ನಲಾಗಿದೆ.

ಉಳಿದ 12 ಲಕ್ಷ ರೂ.ಗಳನ್ನು ಆನಂದ್ ಅವರಿಗೆ ನೀಡದೇ ಮೊಹಮ್ಮದ್ ಗೌಸ್ ತಾನೇ ಉಳಿಸಿಕೊಂಡಿದ್ದ. ಮತ್ತೊಂದೆಡೆ ಮಾತುಕತೆಯಾಗಿದ್ದ ಹಣ ಆನಂದ್ ಕೈಸೇರುವ ಮುನ್ನವೇ ಅವರ ಮನೆಯ ಕೀಯನ್ನು ಖರೀದಿದಾರ ಪ್ರಸಾದ್ ಅವರಿಗೆ ಕೊಟ್ಟಿದ್ದ ಮೊಹಮ್ಮದ್ ಗೌಸ್ ಡೆಮಾಲಿಷ್ ಮಾಡಿಸಿಕೊಳ್ಳಿ ಎಂದು ಹೇಳಿದ್ದ. ಇತ್ತ ವ್ಯವಹಾರದಲ್ಲಿ ಕೆಲ ಗೊಂದಲಗಳುಂಟಾದಾಗ ಆನಂದ್ ಅವರು ಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿದ್ದರು‌. ಇದರಿಂದಾಗಿ ಉಳಿದ 45 ಲಕ್ಷ ರೂ.ಗಳನ್ನು ಪ್ರಸಾದ್ ಇನ್ನೂ ನೀಡಿರಲಿಲ್ಲ.

ವ್ಯವಹಾರದ ಮಾತುಕತೆಗಾಗಿ ಮೈಸೂರಿನ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ ಆನಂದ್ ಪದೇ ಪದೇ ಬೆಂಗಳೂರಿಗೆ ಹೋಗೋಣವೆಂದು ಒತ್ತಾಯಿಸಿದಾಗ ಆರೋಪಿಗಳು ಇಕ್ಕಟ್ಟಿಗೆ ಸಿಲುಕಿದ್ದರು‌. ಹಣ ಕೈಸೇರುವ ಮುನ್ನವೇ ಮನೆ ಡೆಮಾಲಿಷ್ ಆಗಿರುವುದು ತಿಳಿದರೆ ಆನಂದ್ ತಮ್ಮ ವಿರುದ್ಧ ಪ್ರಕರಣ ದಾಖಲಿಸಬಹುದು.

ಬಾಕಿ ಉಳಿಸಿಕೊಂಡಿರುವ 12 ಲಕ್ಷ ಹಾಗೂ 45 ಲಕ್ಷ ರೂ. ಕೊಡಬೇಕಾಗುತ್ತದೆ‌. ಹೇಗಿದ್ದರೂ ಆನಂದ್ ಸಹಿಯಿರುವ ಖಾಲಿ ಚೆಕ್‌ಗಳು ತಮ್ಮ ಬಳಿಯಿರುವುದರಿಂದ ಆತನನ್ನು ಸಾಯಿಸಿದರೆ ಹಣವನ್ನು ನಾವೇ ಹಂಚಿಕೊಳ್ಳಬಹುದು ಎಂದು ಆರೋಪಿಗಳು ಸಂಚು ರೂಪಿಸಿ ಹತ್ಯೆ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ಜುಲೈ 9ರಂದು ಆನಂದ್ ಜೊತೆ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣಿಸಿದ್ದ ಆರೋಪಿಗಳು ಬೆಳಗಿನ ಜಾವ 2.30ರ ಸುಮಾರಿಗೆ ಕೆ.ಆರ್.ಎಸ್ ಡ್ಯಾಮ್ ಬಳಿಯಿರುವ ಸಾಗರಕಟ್ಟೆ ಬ್ರಿಡ್ಜ್ ಬಳಿ ಕಾರು ನಿಲ್ಲಿಸಿದ್ದರು. ಈ ವೇಳೆ ನಿದ್ದೆಯ ಮಂಪರಿನಲ್ಲಿದ್ದ ಆನಂದ್ ಅವರ ಕತ್ತಿಗೆ ನೈಲಾನ್ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದರು. ಬಳಿಕ ಕಾರನ್ನು ಯೂ ಟರ್ನ್ ಪಡೆದು ಮೃತದೇಹವನ್ನು ಲಕ್ಷ್ಮಣ ತೀರ್ಥದ ಹಿನ್ನೀರಿನಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೇಬಿಯಸ್ ಕಾರ್ಪಸ್:
ವೈದ್ಯ ಆನಂದ್ ಸಂಪರ್ಕಕ್ಕೆ ಸಿಗದಿದ್ದಾಗ ಹುಡುಕಾಟ ನಡೆಸಿ ವಿಫಲವಾಗಿದ್ದ ಅವರ ಸಂಬಂಧಿ ರಘುಪತಿ ಎಂಬುವವರು ಜುಲೈ
18ರಂದು ಬನಶಂಕರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಆನಂದ್ ಅವರನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಲು ಹೈಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಹ‌‌ಸಲ್ಲಿಸಿದ್ದರು. ಬಳಿಕ ನಾಪತ್ತೆಯಾಗಿರುವ ಆನಂದ್ ಅವರನ್ನು ಆದಷ್ಟು ಬೇಗ ಪತ್ತೆಹಚ್ಚುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿ ಆದೇಶಿಸಿತ್ತು.

ತನಿಖೆ ಚುರುಕುಗೊಳಿಸಿ ಪೊಲೀಸರು ಆನಂದ್ ಬಳಸುತ್ತಿದ್ದ ಮೊಬೈಲ್ ಫೋನ್ ಅಕ್ಟೋಬರ್‌ನಲ್ಲಿ ಛತ್ತೀಸ್​ಗಢದಲ್ಲಿ ಆನ್ ಆಗಿರುವುದು ಪತ್ತೆಯಾಗಿತ್ತು. ಛತ್ತೀಸ್​ಗಢಕ್ಕೆ ತೆರಳಿ ಫೋನ್ ಬಳಸುತ್ತಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಸೈಯ್ಯದ್ ನೂರ್ ಪಾಷಾನ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಸೈಯ್ಯದ್ ನೂರ್ ಪಾಷಾನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹತ್ಯೆಯ ವಿಚಾರ ಬಯಲಾಗಿದೆ‌.

ಜುಲೈ 11ರಂದು ಮೈಸೂರಿನ ಯಳವಾಲ ಬಳಿ ಹಿನ್ನೀರಿನಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವ ಆನಂದ್ ಅವರದ್ದು ಎಂಬುದು ಖಚಿತಪಡಿಸಿಕೊಂಡ ಬಳಿಕ ನಾಪತ್ತೆ ಪ್ರಕರಣವನ್ನು ಹತ್ಯೆ ಪ್ರಕರಣವೆಂದು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಅಲ್ಲಿನ ಸ್ಥಳೀಯ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗಿದೆ ಎಂದು ಬನಶಂಕರಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

 

- Advertisement -  - Advertisement - 
Share This Article
error: Content is protected !!
";