ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಳ್ಳಕೆರೆ ತಾಲ್ಲೂಕು ಕಾಲುವೆಹಳ್ಳಿಯಲ್ಲಿ ಇತ್ತೀಚೆಗೆ ಮಾದಿಗ ಸಮುದಾಯದ ಮೇಲೆ ನಡೆದ ದಬ್ಬಾಳಿಕೆಗೆ ಸಂಬಂಧಿಸಿದಂತೆ ನೆಪ ಮಾತ್ರಕ್ಕೆ ಒಬ್ಬನನ್ನು ಬಂಧಿಸಿ ಪ್ರಮುಖ ಆರೋಪಿಗಳಾದ ನಾಲ್ವರನ್ನು ಇನ್ನು ಬಂಧಿಸಿಲ್ಲ, ಇನ್ನೆರಡು ದಿನಗಳಲ್ಲಿ ಪತ್ತೆ ಹಚ್ಚಿ ಬಂಧಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಹೆಚ್.ಪ್ರಕಾಶ್ ಬೀರಾವರ ಪೊಲೀಸ್ ಇಲಾಖೆಗೆ ಗಡುವು ನೀಡಿದ್ದಾರೆ.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅನೇಕ ವರ್ಷಗಳಿಂದಲೂ ಕಾಲುವೆಹಳ್ಳಿಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಏಳುನೂರು ಮಂದಿ ನಾಯಕ ಜನಾಂಗದವರಿದ್ದು, ಕೇವಲ ೨೫ ಜನ ಮಾದಿಗರಿದ್ದಾರೆ. ಕ್ಷೌರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾದಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.
ಪ್ರಕರಣ ದಾಖಲಾಗಿ ಎಂಟು ದಿನಗಳಾಗಿದ್ದರೂ ಪ್ರಮುಖ ಆರೋಪಿಗಳನ್ನು ಇನ್ನು ಬಂಧಿಸಿಲ್ಲ. ನೆಪ ಮಾತ್ರ ಕ್ಷೌರಿಕನೊಬ್ಬನನ್ನು ಪೊಲೀಸರು ಬಂಧಿಸಿ ನಿರ್ಲಕ್ಷೆ ವಹಿಸಿದ್ದಾರೆ. ಚಳ್ಳಕೆರೆ ಡಿ.ವೈ.ಎಸ್ಪಿ. ವೃತ್ತ ನಿರೀಕ್ಷಕ ಇವರುಗಳನ್ನು ಕೂಡಲೆ ಅಮಾನತ್ತುಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಮಾದಿಗರನ್ನು ಕರೆಸಿ ಚಿತ್ರದುರ್ಗದಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಮಾದಿಗರನ್ನು ನಾವು ಸಂಬಳಕ್ಕಿಟ್ಟುಕೊಂಡಿದ್ದೇವೆ. ಅವರುಗಳಿಗೆ ನೀವು ಯಾವುದೇ ಕಾರಣಕ್ಕೂ ಕ್ಷೌರ ಮಾಡಬಾರದೆಂದು ಬೆದರಿಕೆ ಹಾಕುತ್ತಿರುವ ನಾಯಕ ಜನಾಂಗದ ನಾಲ್ವರನ್ನು ಮೊದಲು ಬಂಧಿಸಬೇಕು. ಕೆಲವು ಆರ್.ಎಸ್.ಎಸ್.ನವರು, ರೈತರ ಮುಖಂಡರುಗಳು ಚಿತ್ರದುರ್ಗದಕ್ಕೆ ಬಂದು ಪ್ರಜಾಪ್ರಭುತ್ವ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಅವರ ಊರುಗಳಲ್ಲಿಯೇ ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ. ಪ್ರಮುಖ ನಾಲ್ವರನ್ನು ಬಂಧಿಸದಂತೆ ರಾಜಕೀಯ ಒತ್ತಡವಿರುಬಹುದೆಂದು ಡಾ.ಹೆಚ್.ಪ್ರಕಾಶ್ ಬೀರಾವರ ಆರೋಪಿಸಿದರು.
ದಲಿತ ಮುಖಂಡ ಚಿಕ್ಕಗೊಂಡನಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ಸಮನ್ವಯ ಸಮಿತಿ ರಚಿಸಿ ಕಾಲುವೆಹಳ್ಳಿಯಲ್ಲಿ ಸಹೋದರತ್ವ ಬೆಸೆಯುವ ಕೆಲಸವಾಗಬೇಕು. ಮಾದಿಗರು ಮತ್ತು ನಾಯಕ ಜನಾಂಗದರು ಅಣ್ಣ-ತಮ್ಮಂದಿರಂತೆ ಬದುಕುವುದು ನಮಗೆ ಬೇಕಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ೭೭ ವರ್ಷಗಳಾಗಿದ್ದರೂ ಇನ್ನು ಮಾದಿಗರ ಮೇಲಿನ ಅಸ್ಪೃಶ್ಯತೆ ನಿಂತಿಲ್ಲ ಎನ್ನುವುದೇ ನಮಗೆ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಸಂಘಟನೆ ಒಕ್ಕೂಟದ ಉಪಾಧ್ಯಕ್ಷ ಕೆ.ರಾಜಣ್ಣ ಮಾತನಾಡುತ್ತ ಸಹೋದರ ಸಮಾಜದಿಂದಲೇ ನಮ್ಮ ಮೇಲೆ ಅಸ್ಪೃಶ್ಯತೆ ನಡೆಯುವುದಾದರೆ ಇನ್ನು ಸವರ್ಣಿಯರು ಮಾದಿಗರನ್ನು ಅಸ್ಪೃಶ್ಯರನ್ನಾಗಿ ಕಾಣದಿರುತ್ತಾರೆಯೇ ಎಂದು ಪ್ರಶ್ನಿಸಿದರು?
ದಲಿತ ಮುಖಂಡರುಗಳಾದ ಎಂ.ಆರ್.ಶಿವರಾಜ್, ಜೆ.ಜೆ.ಹಟ್ಟಿ ಶಿವಣ್ಣ, ಬಂಗಾರಪ್ಪ, ಪ್ರಕಾಶ್ ಜಿ.ಎಂ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.