ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಡಿಸೆಂಬರ್ 11ರಂದು ಹುಣಸೆ ವ್ಯಾಪಾರಿಗಳ ಸೋಗಿನಲ್ಲಿ ಬಂದ ಕಳ್ಳರು ಕೆಸ್ತೂರು ಗೇಟ್ ಬಳಿ ವ್ಯಾಪಾರ ಮಾಡುವಂತೆ ನಟಿಸಿ ವೃದ್ದೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸಾದಿಕ್ ಪಾಷ ನೇತೃತ್ವದ ತಂಡ ಬಂದಿಸುವಲ್ಲಿ ಯಶಸ್ವಿಯಾಯಿತು.
ಕೆಸ್ತೂರು ಗ್ರಾಮದ 63 ವರ್ಷದ ಸರಸ್ವತಮ್ಮ ಮಾಂಗಲ್ಯ ಸರ ಕಳೆದುಕೊಂಡ ವೃದ್ದೆ. ಸರಸ್ವತಮ್ಮ ಹಸು ಮೇಯಿಸಲು ತೆರಳಿದ್ದ ವೇಳೆ ಹುಣಸೆ ಮರ ವ್ಯಾಪಾರಿಗಳು ಎಂದು ಪರಿಚಯಿಸಿಕೊಂಡು ಬಂದ ಇಬ್ಬರು ಅಪರಿಚಿತರು ವೃದ್ದೆಯೊಂದಿಗೆ ಮಾತಿಗಿಳಿದು ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 52 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಖದೀಮರನ್ನು ಪತ್ತೆ ಹಚ್ಚುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಹಾಗು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.