ನಕಲಿ ಅಂಕಪಟ್ಟಿ ನೀಡುತ್ತಿದ್ದ ಮೂರು ಮಂದಿ ಆರೋಪಿಗಳ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ನಕಲಿ ಅಂಕಪಟ್ಟಿ ನೀಡುತ್ತಿದ್ದ ಮೂವರು ಆರೋಪಿಗಳನ್ನ ಆರ್ಥಿಕ ಅಪರಾಧ ದಳದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆ ಹೆಸರಿನಲ್ಲಿ ನಕಲಿ ಅಂಕಪಟ್ಟಿ ನೀಡಿ ವಂಚಿಸುತ್ತಿದ್ದ ಆರೋಪಿಗಳಾದ ಪ್ರಶಾಂತ್ ಗುಂಡುಮಿ (41), ಮೊನೀಷ್ ಕೆ.ಜೆ (36) ಹಾಗೂ ರಾಜಶೇಖರ (41) ಈ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕತ್ರಿಗುಪ್ಪೆಯ ರಾಮ್‌ರಾವ್ ಲೇಔಟ್‌ನಲ್ಲಿರುವ ಅಕಾಡೆಮಿಯೊಂದರಲ್ಲಿ ಪಿಯುಸಿಗೆ ದಾಖಲಾಗಿದ್ದ ವಿದ್ಯಾರ್ಥಿಗೆ ಯಾವುದೇ ಪರೀಕ್ಷೆ ಬರೆಯದೆಯೇ ಆರೋಪಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಹೆಸರಿನಲ್ಲಿ ಅಂಕಪಟ್ಟಿ ನೀಡಿದ್ದರು. ವಿದ್ಯಾರ್ಥಿಯ ಕಡೆಯವರು ಅಂಕಪಟ್ಟಿ ಪರಿಶೀಲಿಸಿ ಅನುಮಾನಗೊಂಡು ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರೋಪಿಗಳು ಅಧ್ಯಯನ ಕೇಂದ್ರಗಳನ್ನು ತೆರೆದು, ವಿದ್ಯಾರ್ಥಿಗಳನ್ನ ದಾಖಲಿಸಿಕೊಳ್ಳುತ್ತಿದ್ದರು. ಬಳಿಕ ಕಲವೇ ದಿನಗಳದಲ್ಲಿ ಅವರಿಗೆ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಿನಲ್ಲಿ ಆರೋಪಿಗಳು ಅಂಕಪಟ್ಟಿಗಳನ್ನು ನೀಡುತ್ತಿದ್ದ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇವರ ಸಂಸ್ಥೆಗೆ ದಾಖಲಾದ ವಿದ್ಯಾರ್ಥಿಗಳಿಂದ 5 ರಿಂದ 10 ಸಾವಿರ ಹಣ ಪಡೆದು ಆರೋಪಿಗಳು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ನಕಲಿ ಅಂಕಪಟ್ಟಿ ಪಡೆದವರು ಸಾರಿಗೆ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧೆಡೆ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಕೆಲಸ ನೀಡುವ ಮೊದಲು ಪರಿಶೀಲನೆ ಮಾಡಿದಾಗಲೂ ಸಹ ಅಸಲಿ ಅಂಕಪಟ್ಟಿ ಎಂದೇ ಆರೋಪಿಗಳು ಮಾಹಿತಿ ನೀಡಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿರುವ ಸಿಸಿಬಿ ಪೊಲೀಸರು ಈ ಮಾದರಿಯ ಅಂಕಪಟ್ಟಿ ಎಲ್ಲಿಯಾದರೂ ಸಲ್ಲಿಕೆಯಾಗಿದ್ದಲ್ಲಿ ಸಿಸಿಬಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.

ಧಾರವಾಡ ಮತ್ತು ಬೆಂಗಳೂರಿನಲ್ಲಿ ಆರೋಪಿಗಳು ಅಂಕಪಟ್ಟಿ ಪ್ರಿಂಟ್ ಮಾಡಿರುವುದು ಪತ್ತೆಯಾಗಿದ್ದು, ಈವರೆಗೂ ಸುಮಾರು 350 ಜನರಿಗೆ ನಕಲಿ ಅಂಕಪಟ್ಟಿ ನೀಡಿರುವುದು ತಿಳಿದು ಬಂದಿದೆ. ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

Share This Article
error: Content is protected !!
";