ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಮಮಾರ್ಗದಲ್ಲಿ ರಕ್ತಚಂದನ ಮರದ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ.
ಬಂಧಿತ ಆರೋಪಿಗಳು ಆಂಧ್ರಪ್ರದೇಶದಿಂದ ಬೆಂಗಳೂರು ನಗರಕ್ಕೆ ರಕ್ತ ಚಂದನ ತುಂಡುಗಳನ್ನು ತಂದು, ಇಲ್ಲಿಂದ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಎರಡು ಪ್ರಕರಣಗಳನ್ನು ಬೆಂಗಳೂರು ಪೊಲೀಸರು ಭೇದಿಸಿದ್ದು ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ, 1.75 ಕೋಟಿ ರೂ. ಮೌಲ್ಯದ 1,897 ಕೆ.ಜಿ ರಕ್ತಚಂದನ ವಶಕ್ಕೆ ಪತೆಗೆದುಕೊಂಡಿದ್ದಾರೆ.
ಆರೋಪಿಗಳು ಅಕ್ರಮವಾಗಿ ಹಣ ಸಂಪಾದಿಸಲು ಹಾಗೂ ವ್ಯವಸ್ಥಿತ ಜಾಲದ ಮೂಲಕ ಕಾರು ಮತ್ತು ಬೊಲೆರೊ ವಾಹನದಲ್ಲಿ ಬಚ್ಚಿಟ್ಟುಕೊಂಡು ನಗರದಿಂದ ತಮಿಳುನಾಡಿಗೆ ಮಾರಾಟ ಮಾಡಲು ತಯಾರಿದ್ದ ಖಚಿತ ಮಾಹಿತಿ ಅಧರಿಸಿ, ಹುಳಿಮಾವು ಹಾಗೂ ಆರ್.ಟಿ. ನಗರ ಪೊಲೀಸರು ಪ್ರತ್ಯೇಕ ಎರಡು ಪ್ರಕರಣಗಳಲ್ಲಿ 1.75 ಕೋಟಿ ಮೌಲ್ಯದ ರಕ್ತಚಂದನ ಜಪ್ತಿ ಮಾಡಿದ್ದಾರೆ. ರಕ್ತಚಂದನ ಅಕ್ರಮ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
ಕಾರಿನಲ್ಲಿ ಸಾಗಾಟ:
ಆಂಧ್ರಪ್ರದೇಶದ ಕಡಪದಿಂದ ರಕ್ತ ಚಂದನ ತುಂಡುಗಳನ್ನು ತರಿಸಿಕೊಂಡು, ನಗರದಿಂದ ಹೊಸೂರು ಮಾರ್ಗವಾಗಿ ತಮಿಳುನಾಡಿಗೆ ಹೋಗಿ ಮಾರಾಟ ಮಾಡುತ್ತಿದ್ದ ಆರೋಪಿ ಅಹಮ್ಮದ್ ಪಾಷಾ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1 ಕೋಟಿ ಮೌಲ್ಯದ 1,143 ಕೆ.ಜಿ ರಕ್ತ ಚಂದನ, ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಶಾಮೀಲಾಗಿದ್ದ ಅಪ್ರಾಪ್ತನನ್ನೂ ವಶಕ್ಕೆ ಪಡೆದು ರಿಮ್ಯಾಂಡ್ ಹೋಮ್ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಅಹಮ್ಮದ್ ಪಾಷಾ ಥಣಿಸಂದ್ರದಲ್ಲಿ ವಾಸವಾಗಿದ್ದು ಕಳೆದ ಆರು ತಿಂಗಳ ಹಿಂದೆ ಪರಿಚಯವಾದ ವ್ಯಕ್ತಿಯಿಂದ ರಕ್ತಚಂದನ ಮಾರಾಟದ ಬಗ್ಗೆ ತಿಳಿದುಕೊಂಡಿದ್ದ. ಸುಲಭವಾಗಿ ಹಣ ಸಂಪಾದಿಸಲು ಮುಂದಾದ ಆರೋಪಿ, ಕಡಿಮೆ ಬೆಲೆಗೆ ರಕ್ತಚಂದನ ಖರೀದಿಸಿ ನಗರದ ಮೂಲಕ ತಮಿಳುನಾಡಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದರು.
ರಕ್ತಚಂದನ ಕದ್ದು ಸಾಗಾಟ:
ಮತ್ತೊಂದು ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿಯಿಂದ ಬೊಲೆರೊ ವಾಹನದಲ್ಲಿ ರಕ್ತಚಂದನ ತುಂಡುಗಳನ್ನು ತುಂಬಿಕೊಂಡು ನಗರಕ್ಕೆ ಬಂದು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿ, 75 ಲಕ್ಷ ರೂ. ಮೌಲ್ಯದ 754 ಕೆ.ಜಿ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಶೇಖರ್ ಹಾಗೂ ವರಪ್ರಸಾದ್ ಬಂಧಿತ ಆರೋಪಿಗಳು. ಆಂಧ್ರಪ್ರದೇಶ ಮೂಲದ ಆರೋಪಿಗಳು ಪದವೀಧರಾಗಿದ್ದರೂ ಕೆಲಸವಿಲ್ಲದೆ ಓಡಾಡುತ್ತಿದ್ದರು. ಜೀವನ ನಿರ್ವಹಣೆಗಾಗಿ ಅಡ್ಡದಾರಿ ತುಳಿದ ಆರೋಪಿಗಳು ಮದನಪಲ್ಲಿಯ ಸುಂಡೆಪಲ್ಲಿ ಭಾಗದಿಂದ ಕಳ್ಳತನ ಮಾಡಿದ ರಕ್ತಚಂದನವನ್ನು ಬೊಲೆರೊ ವಾಹನದದಲ್ಲಿ ನಗರಕ್ಕೆ ತಂದು ಮಾರಾಟ ಮಾಡಲು ಮುಂದಾಗಿದ್ದರು. ಆರೋಪಿಗಳ ವಿರುದ್ಧ ಬಿಎನ್ಎಸ್ ಹಾಗೂ ಅರಣ್ಯ ಕಾಯ್ದೆಯಡಿಯ ಸೆಕ್ಷನ್ಗಳನ್ನು ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

