ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನ್ಯಾಯಾಲಯದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನೂರಾರು ಜನರಿಂದ ಕೋಟ್ಯಂತರ ಹಣ ಪಡೆದು ವಂಚಿಸಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜೈಸನ್ ಡಿಸೋಜಾ ಮತ್ತು ಲವೀನಾ ಬಂಧಿತ ಆರೋಪಿಗಳು. ನಿರುದ್ಯೋಗಿಗಳು, ಖಾಸಗಿ ಕಂಪನಿಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದವರನ್ನು ಗುರಿಯಾಗಿಸಿಕೊಂಡು ವಂಚನೆಗಿಳಿಯುತ್ತಿದ್ದ ಇವರು, ಅವರಿಗೆ ಕೋರ್ಟ್ನಲ್ಲಿ ಡಿ-ಗ್ರೂಪ್ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸುತ್ತಿದ್ದರು. ಇದೇ ರೀತಿ ಒಬ್ಬೊಬ್ಬರಿಂದ 10 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಹಣ ಸಂಗ್ರಹಿಸಲು ಮತ್ತು ಉದ್ಯೋಗಾಸಕ್ತರನ್ನು ಹುಡುಕಲು ಏಜೆಂಟ್ಗಳನ್ನು ನೇಮಿಸಿಕೊಂಡಿದ್ದ ಆರೋಪಿಗಳು, ವಂಚಿಸಿದ ಹಣದಲ್ಲಿ ಆ ಏಜೆಂಟ್ಗಳಿಗೆ ಕಮಿಷನ್ ನೀಡುತ್ತಿದ್ದರು.
ಖಾಸಗಿ ಹೋಟೆಲ್ಗಳಲ್ಲಿ ದಾಖಲೆ ಪರಿಶೀಲನೆಯ ನಾಟಕವಾಡಿ, ನಕಲಿ ಆಫರ್ ಲೆಟರ್ಗಳನ್ನು ತೋರಿಸಿ ನಂಬಿಸುತ್ತಿದ್ದರು. ಹಣ ನೀಡಿದವರು ಕೆಲಸದ ಬಗ್ಗೆ ವಿಚಾರಿಸಿದಾಗ “ನಾಳೆ, ನಾಡಿದ್ದು” ಎಂದು ಕಾಲಹರಣ ಮಾಡುತ್ತಿದ್ದರು. ಕೊನೆಗೆ ಸಂತ್ರಸ್ತರ ಫೋನ್ ಕರೆಗಳನ್ನು ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದರು.
ಆರೋಪಿಗಳ ವಿರುದ್ಧ ಬಸವೇಶ್ವರ ನಗರ ಸೇರಿದಂತೆ ಕೆಲವೆಡೆ ಪ್ರಕರಣಗಳು ದಾಖಲಾಗಿದ್ದವು. ಪ್ರಾಥಮಿಕ ತನಿಖೆಯ ಪ್ರಕಾರ, 500ಕ್ಕೂ ಹೆಚ್ಚು ಜನರಿಂದ 25 ಕೋಟಿ ರೂಪಾಯಿಗೂ ಅಧಿಕ ಹಣ ಲೂಟಿ ಮಾಡಿದ್ದಾರೆ ಎನ್ನಲಾಗಿದೆ. 2024ರಲ್ಲೂ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿ ಜೈಲು ಸೇರಿದ್ದ ದಂಪತಿ, ನಂತರ ಜೈಲಿನಿಂದ ಬಿಡುಗಡೆಯಾದ ಬಳಿಕವೂ ಬುದ್ಧಿ ಕಲಿಯದೇ ಮತ್ತದೇ ಕೃತ್ಯ ಎಸಗಿರುವುದು ಕಂಡುಬಂದಿದೆ. ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

