ಸರ್ಕಾರಿ ನೌಕರಿ ಆಮಿಷವೊಡ್ಡಿ ಲಕ್ಷಾಂತರ ವಂಚಿಸಿದ್ದ ಚಿತ್ರದುರ್ಗದ ಶ್ರೀನಿನಾಥ್ ಬಂಧನ
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ರಾಜಕೀಯ ನಾಯಕನಂತೆ ಸೋಗು ಹಾಕಿ, ಜನರಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ದಾವಣಗೆರೆಯಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಿ ಶ್ರೀನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಕಾರಣಿಯಂತೆ ಬಿಂಬಿಸಿಕೊಂಡಿರುವ ಚಿತ್ರದುರ್ಗದ ಶ್ರೀನಾಥ್, ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ವಂಚನೆ ಮಾಡಿದ್ದಾನೆ. ಜಲಸಂಪನ್ಮೂಲ ಇಲಾಖೆಯಲ್ಲಿ ಡಿ ದರ್ಜೆ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ, ಪ್ರತಿ ವ್ಯಕ್ತಿಯಿಂದ ಮೂರರಿಂದ ನಾಲ್ಕು ಲಕ್ಷ ರೂ.ಗಳನ್ನು ಪಡೆದಿದ್ದಾನೆ.
ನಾಗರಾಜ್ ಎಂಬುವವರು ತಮ್ಮ ಮಗನಿಗೆ ಅಟೆಂಡರ್ ಹುದ್ದೆಗಾಗಿ ಮೂರುವರೆ ಲಕ್ಷ ರೂಪಾಯಿ ನೀಡಿದ್ದು, ಶ್ರೀನಾಥ್ ನಕಲಿ ನೇಮಕಾತಿ ಪತ್ರ ಮತ್ತು ಸರ್ಕಾರಿ ಸೀಲ್‌ಗಳನ್ನು ಬಳಸಿ ವಂಚಿಸಿದ್ದ.
ಈ ಬಗ್ಗೆ ತಿಳಿಯಲು ಬೆಂಗಳೂರಿನ ಜಲಸಂಪನ್ಮೂಲ ಕಚೇರಿಗೆ ತೆರಳಿದಾಗ ಮೋಸ ಹೋಗಿರುವುದು ನಾಗರಾಜ್ ಅವರಿಗೆ ತಿಳಿದುಬಂದಿದೆ. ನಂತರ ನಾಗರಾಜ್ ಹಾಗೂ ಇತರ ಸಂತ್ರಸ್ತರು ಆರೋಪಿ ಶ್ರೀನಾಥ್ ವಿರುದ್ಧ ದಾವಣಗೆರೆ ಕೆಟಿಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಶ್ರೀನಾಥ್ ಹತ್ತಾರು ಜನರಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ.

