ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮಧ್ಯ ಕರ್ನಾಟಕದ ದಾವಣಗೆರೆ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ.
ಐಟಿ ಹಬ್ ಆಗಿ ಹೊರಹೊಮ್ಮವ ಎಲ್ಲ ರೀತಿಯ ಸಾಮರ್ಥ್ಯ ದಾವಣಗೆರೆಗಿದೆ.ಈಗಾಗಲೇ ಎಸ್ಟಿಪಿಐ ಉಪ ಕೇಂದ್ರ ಜಿಲ್ಲೆಯಲ್ಲಿದೆ. ಇಲ್ಲಿ ಐಟಿ ಪಾರ್ಕ್ ಆರಂಭಕ್ಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ನಾಲ್ಕೈದು ಕಡೆ ಸ್ಥಳ ಗುರುತಿಸಿದ್ದಾರೆ.
ಜಮೀನು, ಕಟ್ಟಡದ ಬೇಡಿಕೆ:
ದಾವಣಗೆರೆಯಲ್ಲಿ ಐಟಿ ಪಾರ್ಕ್ ಆರಂಭಿಸಲು ಎರಡು ಎಕರೆ ಜಾಗ ಸೇರಿದಂತೆ, ಆ ಜಾಗದಲ್ಲಿ 50 ಸಾವಿರ ಚದರ ಅಡಿ ಪ್ರದೇಶದ ಕಟ್ಟಡ ಬೇಕಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಸಂಸತ್ತಿನಲ್ಲಿ ಹೇಳಿದ್ದರು. ಇದಕ್ಕೆ ವ್ಯವಸ್ಥೆ ಮಾಡಿಸುವುದಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಭರವಸೆ ನೀಡಿದ್ದರು.
ದಾವಣಗೆರೆ ಜಿಲ್ಲಾಧಿಕಾರಿ ಡಾ. ಗಂಗಾಧರ್ ಸ್ವಾಮಿ ಜಿಎಂ ಅವರ ನೇತೃತ್ವದಲ್ಲಿ ನಾಲ್ಕೈದು ಕಡೆ ಸ್ಥಳ ಗುರುತಿಸಲಾಗಿದೆ. ಬೆಂಗಳೂರು ಎಸ್ಟಿಪಿಐ ಕೇಂದ್ರ ಕಚೇರಿಯ ಅಧಿಕಾರಿಗಳು ದಾವಣಗೆರೆ ವಿಶ್ವವಿದ್ಯಾನಿಲಯ, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜ್, ಸ್ಮಾರ್ಟ್ ಸಿಟಿ ಕಟ್ಟಡ ಹೀಗೆ ವಿವಿಧ ಕಡೆ ಸ್ಥಳಕ್ಕೆ ಭೇಟಿ ನೀಡಿ ಐಟಿ ಪಾರ್ಕ್ ಆರಂಭಿಸಲು ಸೂಕ್ತ ಸ್ಥಳ ಪರಿಶೀಲನೆ ಮಾಡಿದ್ದಾರೆ” ಎಂದು ಸಂಸದೆ ಪ್ರಭಾ ಅವರು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಐಟಿ ಪಾರ್ಕ್ ಆರಂಭಿಸಿದರೆ ಇಂಜಿನಿಯರಿಂಗ್ ಪದವೀಧರರು ಅಲ್ಲದೇ ನೆರೆಯ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಗಳ ಪದವೀಧರರ ವಲಸೆ ಹೋಗುವುದು ತಪ್ಪಿಸಬಹುದು. ಅಲ್ಲದೇ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ನೀಡಿದಂತಾಗುತ್ತದೆ. ಐಟಿ ಪಾರ್ಕ್ ಆರಂಭವಾದರೆ ದಾವಣಗೆರೆಗೆ ಬಂದು ಹೋಗಲು ವಂದೇ ಭಾರತ್ ರೈಲು ಸೇವೆ ಇದೆ. ಕೇವಲ ಒಂದೂವರೆ ಗಂಟೆ ಕ್ರಮಿಸಿದರೆ ಶಿವಮೊಗ್ಗ, ಹುಬ್ಬಳ್ಳಿ ವಿಮಾನ ನಿಲ್ದಾಣಗಳಿವೆ. ಹೀಗೆ ಎಲ್ಲ ರೀತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಂಸದೆ ಡಾ ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಎಸ್ಟಿಪಿಐ ಉಪ ಕೇಂದ್ರ:
ದಾವಣಗೆರೆ ನಗರದ ಜೆಹೆಚ್ ಪಟೇಲ್ ಬಡಾವಣೆಯಲ್ಲಿ ಈಗಾಗಲೇ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್ ಟಿಪಿಐ) ಉಪಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದರಡಿ ಐಟಿ ಪಾರ್ಕ್ ಮಾಡಬೇಕೆಂಬುದು ದಾವಣಗೆರೆ ಜನರ ಒತ್ತಾಯ ಆಗಿದೆ.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿ, ಎಸ್ಟಿಪಿಐ ಬೆಂಗಳೂರು ಕೇಂದ್ರ ಕಚೇರಿಗೆ ಭೇಟಿ ಮಾಡಿ ಎರಡು ತಿಂಗಳು ಕಳೆದಿದೆ. ಎಸ್ಟಿಪಿಐ ಕೇಂದ್ರದ ಅಧಿಕಾರಿಗಳು ದಾವಣಗೆರೆಗೆ ಆಗಮಿಸಿ ವಿವಿಧ ಕಡೆ ಸ್ಥಳ ಪರಿಶೀಲನೆ ಮಾಡಿದ್ದಾರೆ. ದಾವಣಗೆರೆ ವಿಶ್ವವಿದ್ಯಾನಿಲಯ, ಇಂಜಿನಿಯರಿಂಗ್ ಕಾಲೇಜುಗಳನ್ನು ನೋಡಿಕೊಂಡು ಹೋಗಿದ್ದಾರೆ. ಅಲ್ಲದೇ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರಕ್ಕೆ ಎರಡು ಎಕರೆ ಜಮೀನು ಕೇಳಿದ್ದರು, ಅದರಂತೆ ನಾವು ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು, ಸ್ಮಾರ್ಟ್ ಸಿಟಿ ಕಟ್ಟಡ ವಿವಿಧ ಸ್ಥಳಗಳನ್ನು ಗುರುತಿಸಿದ್ದೇವೆ ಎಂದರು.
ಎಸ್ಟಿಪಿಐ ಕೇಂದ್ರದವರು ಇಡೀ ಒಂದು ವರ್ಷ ಕ್ಯಾಲೆಂಡರ್ ಆಫ್ ಇವೆಂಟ್ ಮಾಡಲು ಮುಂದಾಗಿದ್ದಾರೆ. ಎಕ್ಸಿಮಿಷನ್ ಮಾಡಿ ಬೇರೆ ಬೇರೆ ಕಂಪನಿಗಳನ್ನು ದಾವಣಗೆರೆಗೆ ತರಲು ಪ್ರಯತ್ನ ನಡೆದಿದೆ. ಅಲ್ಲದೇ ಐಟಿಬಿಟಿ ಕಂಪನಿಗಳು ದಾವಣಗೆರೆಗೆ ತರಲು ದಾವಣಗೆರೆಯಲ್ಲಿ ಪ್ರತಿಯೊಂದು ಅನುಕೂಲಗಳಿವೆ. ದಾವಣಗೆರೆ ಬರಲು ಹೋಗಲು ಇನ್ಫ್ರಾಸ್ಟ್ರಕ್ಚರ್ ಇದೆ. ಬರಲು ವಂದೇ ಭಾರತ್ ರೈಲಿನ ಸೌಲಭ್ಯ ಇದೆ. ಶಿವಮೊಗ್ಗ ಹುಬ್ಬಳಿಗೆ ತಲಪಲು ಒಳ್ಳೆ ಹೈವೇ ಇದ್ದು, ಹೈವೇ ಮೂಲಕ ಒಂದೂವರೆ ತಾಸಿನಲ್ಲಿ ಶಿವಮೊಗ್ಗ ಹುಬ್ಬಳಿಗೆ ವಿಮಾನ ನಿಲ್ದಾಣಗಳಿಗೆ ತಲುಪಬಹುದು ಎಲ್ಲ ರೀತಿಯ ಸೌಲಭ್ಯ ಇದೆ ಎಂದರು.

