ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೈಪ್‌ಲೈನ್ ಸೇರಿದಂತೆ ವಿವಿಧ ಕಡೆ ನೀರು ಸೋರಿಕೆಯಾಗಿ ವ್ಯರ್ಥವಾಗುವುದನ್ನು ತಡೆಯಲು ಈ ಹಿಂದೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡಿದ್ದ ಬೆಂಗಳೂರು ಜಲಮಂಡಳಿ ಇದೀಗ ಇಂಧನ ಕ್ಷಮತೆ ಹೆಚ್ಚಿಸಲು ಮತ್ತು ವಿದ್ಯುತ್ ಪೋಲಾಗುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ ಆಧಾರಿತ ಪಂಪ್ ಮಾನಿಟರಿಂಗ್ ಆರಂಭಿಸಿದೆ.
ಬೆಂಗಳೂರಿನ 78 ಸ್ಟೇಷನ್ಗಳಲ್ಲಿ ಎಐ ಆಧಾರಿತ ಪಂಪು ಮಾನಿಟರಿಂಗ್ ಸಾಧನೆಗಳನ್ನು ಅಳವಡಿಸಲಾಗಿದೆ. ಇದರಿಂದ ವಾರ್ಷಿಕ 40 ಕೋಟಿ ರೂಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರು ಸುತ್ತ ಮುತ್ತ 78 ಕಡೆಗಳಲ್ಲಿ ಎಐ ಪಂಪ್ ಮಾನಿಟರಿಂಗ್ IPUMPNET ಅಳವಡಿಸಿಕೊಳ್ಳುವ ಮೂಲಕ ಸುಧಾರಿತ ತಂತ್ರಜ್ಞಾನ ಬಳಸಿಕೊಂಡ ವಿಶ್ವದ ಮೊದಲ ನೀರು ಸರಬರಾಜು ಮಂಡಳಿ ಎಂಬ ಹೆಗ್ಗಳಿಕೆಗೆ ಬೆಂಗಳೂರು ಜಲ ಮಂಡಳಿ ಪಾತ್ರವಾಗಿದೆ.
ಏನಿದು IPUMPNET?:
IPUMPNET ಹೆಸರಿನ ಈ ಎಐ ಆಧಾರಿತ ವ್ಯವಸ್ಥೆಯು ರಿಯಲ್ ಟೈಮ್ ಸೆನ್ಸರ್‌ಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ಸಾಧನಗಳಂತಲ್ಲದೆ ಇದು ಪ್ರತಿಕ್ಷಣವೂ ಪಂಪ್ಗಳ ಕ್ಷಮತೆ ಗಮನಿಸುತ್ತಿರುತ್ತದೆ. ಅತಿಯಾದ ಇಂಧನ ಬಳಕೆ, ವಿದ್ಯುತ್ ಪೋಲಾಗುವುದನ್ನು ಗಮನಿಸಿ ಅಲರ್ಟ್ ಮಾಡುತ್ತದೆ.
ಈ IPUMPNET ವ್ಯವಸ್ಥೆಯು ಈಗಾಗಲೇ ಹಲವಾರು ಪಂಪ್‌ಗಳು ಮಿತಿಗಳಿಗಿಂತ ಹೆಚ್ಚಿನ ವಿದ್ಯುತ್ ಬಳಸುತ್ತಿರುವುದನ್ನು ಗುರುತಿಸಿದೆ.
ಈ ಡೇಟಾವನ್ನು ಆಧರಿಸಿ, ಜಲ ಮಂಡಳಿಯು ಕಡಿಮೆ-ದಕ್ಷತೆಯ ಪಂಪ್‌ಗಳನ್ನು ಬದಲಾಯಿಸಿ ಹೆಚ್ಚಿನ-ದಕ್ಷತೆಯ ಪಂಪ್‌ಗಳನ್ನು ಅಳವಡಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಎಐ ವ್ಯವಸ್ಥೆಯಿಂದಾಗಿ, ಇಂಧನ ಪೋಲಾಗುವುದನ್ನು ತಡೆಗಟ್ಟುವುದರ ಜತೆಗೆ ಜಲಮಂಡಳಿಗೆ ಆರ್ಥಿಕವಾಗಿಯೂ ಉಳಿತಾಯವಾಗಲಿದೆ. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವುದೂ ಸಾಧ್ಯವಾಗಲಿದೆ. ಇದರಿಂದಾಗಿ ಬೆಂಗಳೂರಿನ ಪರಿಸರ ಸುಸ್ಥಿರತೆಗೆ ಗಮನಾರ್ಹವಾಗಿ ಕೊಡುಗೆ ನೀಡಿದಂತಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

