ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯನವರೇ, ಅನಾರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಸಂಪುಟದಿಂದ ವಜಾ ಮಾಡುವವರೆಗೂ ಆರೋಗ್ಯ ಇಲಾಖೆ ಸುಧಾರಿಸುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ದಿನಬೆಳಗಾದರೆ ಒಂದೊಂದು ಹೊಸ ಎಡವಟ್ಟುಗಳೊಂದಿಗೆ ಸುದ್ದಿ ಆಗುತ್ತಿರುವ ಆರೋಗ್ಯ ಇಲಾಖೆ, ಇವತ್ತು 230 ಸಮುದಾಯ ಆರೋಗ್ಯ ಕೇಂದ್ರಗಳನ್ನು (CHC) ಕೆಳದರ್ಜೆಗಿಳಿಸುವ ಆಘಾತಕಾರಿ ನಡೆಗೆ ಸುದ್ದಿಯಾಗಿದೆ.
CHC ಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಏಕಾಏಕಿ ತಜ್ಞ ವೈದ್ಯರನ್ನು ತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಿದರೆ, ಆರೋಗ್ಯ ಸೇವೆ ಅರಿಸಿ CHC ಗಳಿಗೆ ದಿನನಿತ್ಯ ಭೇಟಿ ನೀಡುವ ನೂರಾರು ಹೊರರೋಗಿಗಳ ಗತಿ ಏನು ಸ್ವಾಮಿ? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲು ಯೋಗ್ಯತೆ ಇಲ್ಲದ ಸರ್ಕಾರ ಈ ರೀತಿ ಏಕಾಏಕಿ ವೈದ್ಯರನ್ನ CHCಗಳಿಂದ ತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲು ಮುಂದಾಗಿರುವುದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಎಷ್ಟು ದಿವಾಳಿ ಆಗಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

