HMPV ವೈರಸ್ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಿ-ಅಶೋಕ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ಇಬ್ಬರು ಶಿಶುಗಳಿಗೆ HMPV ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ರಾಜ್ಯದ ಜನರಲ್ಲಿ ಆತಂಕ ಮನೆಮಾಡಿದ್ದು, ಸರ್ಕಾರ ಇದನ್ನ ಅತ್ಯಂತ ಗಂಬೀರವಾಗಿ ಪರಿಗಣಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ ಮಾಡಿದ್ದಾರೆ.

ಕಳೆದ ಐದಾರು ತಿಂಗಳುಗಳಿಂದ ನಿರಂತರವಾಗಿ ಸಂಭವಿಸುತ್ತಿರುವ ಬಾಣಂತಿ ಮಹಿಳೆಯರು ಮತ್ತು ನವಜಾತ ಶಿಶುಗಳ ಸರಣಿ ಸಾವನ್ನ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕರ್ನಾಟಕ ಕಾಂಗ್ರೆಸ್, HMPV ವೈರಾಣು ಸೋಂಕು ಹರಡುವುದನ್ನು ನಿಯಂತ್ರಣ ಮಾಡಲು ಸಮರ್ಥವೇ ಎಂಬ ಅನುಮಾನ ಸಹಜವಾಗಿ ಸಾರ್ವಜನಿಕರಲ್ಲಿ ಮೂಡಿದೆ ಎಂದು ಅಶೋಕ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ವಿಪಕ್ಷ ನಾಯಕನಾಗಿ ಸರ್ಕಾರಕ್ಕೆ ನನ್ನ ಸಲಹೆಗಳು:
1.) ಕೇವಲ ಕಾಟಾಚಾರಕ್ಕೆ ಸಭೆಗಳನ್ನು ಮಾಡಿ
, ಮಾರ್ಗಸೂಚಿ ಬಿಡುಗಡೆ ಮಾಡಿದರೆ ಸಾಲದು. ಸರ್ಕಾರ ಈ ಕೂಡಲೇ ಸಮರ್ಥ ಸಚಿವರನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು.

2.) ಸರ್ಕಾರಕ್ಕೆ ಮತ್ತು ಟಾಸ್ಕ್ ಫೋರ್ಸ್ ಗೆ ತಾಂತ್ರಿಕ ಮಾರ್ಗದರ್ಶನ ನೀಡಲು ಒಂದು ತಜ್ಞರ ವೈದ್ಯರ ಸಮಿತಿ ರಚನೆ ಮಾಡಬೇಕು.

3.) ಸಣ್ಣ ಮಕ್ಕಳು, ಹಿರಿಯ ನಾಗರಿಕರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಈಗಾಗಲೇ ಶ್ವಾಸಕೋಶ ಸಮಸ್ಯೆಗಳಿಂದ ಬಳಲುತ್ತಿರುವವರ ಸಮೀಕ್ಷೆ ನಡೆಸಿ ಅಗತ್ಯವಿದ್ದವರಿಗೆ ಪರೀಕ್ಷೆ ಮಾಡಿಸಬೇಕು.

4.) ಅಂತಹವರು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು.
5.) ತಾಲ್ಲೂಕು ಆಸ್ಪತ್ರೆಗಳಲ್ಲಿ
, ಜಿಲ್ಲಾಸ್ಪತ್ರೆಗಳಲ್ಲಿ, ವಿಶೇಷವಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ, ಸೋಂಕು ತಗುಲಿದವರ ಚಿಕಿತ್ಸೆಗೆ ಅಗತ್ಯ ಇರುವ ಔಷಧಿ, ಆಕ್ಸಿಜನ್, ಐಸಿಯು ಬೆಡ್ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳು ಇದೆಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವರುಗಳು, ಆರೋಗ್ಯ ಸಚಿವರು ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು.

6.) ಅಗತ್ಯ ಬಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡಲು ಕ್ರಮ ಕೈಗೊಳ್ಳಬೇಕು.
7.) ರಾಜ್ಯಾದ್ಯಂತ ಹೆಚ್ಚುವರಿ ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಬೇಕು.
 8.) ಶಾಲೆಗಳಲ್ಲಿ ಮಕ್ಕಳ ಮೇಲೆ ವಿಶೇಷ ನಿಗಾ ಇಡಲು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಬೇಕು.

9.) ಸೋಂಕು ಹರಡುವಿಕೆಯ ಸ್ಥಿತಿಗತಿ ಬಗ್ಗೆ ಪಾರದರ್ಶಕ ಮಾಹಿತಿ ನೀಡಲು ಪ್ರತಿನಿತ್ಯ ಆರೋಗ್ಯ ಇಲಾಖೆ ವತಿಯಿಂದ ಅಧಿಕೃತ ಬುಲೆಟಿನ್ ಬಿಡುಗಡೆ ಮಾಡಬೇಕು.
10.) ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಮುಂದಾಲೋಚನೆ ಮಾಡಿ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿರಬೇಕು.

ಬಾಣಂತಿಯರ ಸರಣಿ ಸಾವಿನಲ್ಲಿ ಆಗುತ್ತಿರುವ ನಿರ್ಲಕ್ಷ್ಯ, ಎಡವಟ್ಟುಗಳು HMPV ವೈರಾಣು ಸೋಂಕು ನಿಯಂತ್ರಣದಲ್ಲಿ ಆಗದಂತೆ ಎಲ್ಲ ರೀತಿಯಲ್ಲೂ ಮುನ್ನೆಚ್ಚರಿಕೆ ವಹಿಸಲು ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಮತ್ತು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ  ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಅಶೋಕ್ ಆಗ್ರಹ ಮಾಡಿದ್ದಾರೆ.

- Advertisement -  - Advertisement - 
Share This Article
error: Content is protected !!
";