ಚಂದ್ರವಳ್ಳಿ ನ್ಯೂಸ್, ತುಮಕೂರು:
ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರನ್ನು ಮಾತನಾಡಿಸಿ ಅಭಿಪ್ರಾಯ, ಕ್ಷೇತ್ರದ ಬಗ್ಗೆ ಹಾಗೂ ಆಡಳಿತದ ಕುರಿತು ಮಾತನಾಡಿಕೊಂಡು ಹೋಗಿದ್ದಾರೆ. ಅವರ ಅನಿಸಿಕೆಗಳನ್ನು ತಿಳಿದುಕೊಂಡು ಆ ನಂತರ ಸಿಎಂ ಜೊತೆ ಚರ್ಚೆ ಮಾಡುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರ ಪಟ್ಟಿ ಕುರಿತು ವಿಜಯಾನಂದ ಕಾಶಪ್ಪನವರ್ ಅವರ ಹೇಳಿಕೆ ವಿಚಾರ ನನಗೆ ಗೊತ್ತಿಲ್ಲ, ಅವರನ್ನೇ ಕೇಳಬೇಕು ಎಂದು ಪರಮೇಶ್ವರ್ ತಿಳಿಸಿದರು.
ಕಾಂಗ್ರೆಸ್ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಅದೆಲ್ಲ ನನಗೆ ಗೊತ್ತಿಲ್ಲ ಎಂದರು.
ಬೆಂಗಳೂರಿನಲ್ಲಿ ಕಂಠೀರವ ಸ್ಟೇಡಿಯಂ ಬಿಟ್ಟರೆ ತುಮಕೂರಿನಲ್ಲಿ ಉತ್ತಮ ಕ್ರೀಡಾಂಗಣವಿದೆ. ಅದರ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.
ತುಮಕೂರು ನಗರದ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಅವರು, ಬಸ್ ನಿಲ್ದಾಣದಲ್ಲಿನ ಸ್ವಚ್ಛತೆಯ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ನಿಲ್ದಾಣದಲ್ಲಿನ ಹೋಟೆಲ್ಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಮತ್ತು ಹೋಟೆಲ್‌ನ ಒಳಗೆ ಸ್ವಚ್ಛತೆ ಕುರಿತು ಖುದ್ದು ಜನರನ್ನು ಭೇಟಿ ಮಾಡಿ ಮಾಹಿತಿ ಪಡೆದ ಸಚಿವರು ಗ್ರಾಹಕರಿಗೆ ಆಹಾರ ವಿತರಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗು ಡಿಸಿ ಅವರೊಂದಿಗೆ ಕುಳಿತು ಪರಮೇಶ್ವರ್ ಅವರು ಹೋಟೆಲ್ನಲ್ಲಿಯೇ ಕಾಫಿ ಕುಡಿದರು.
ನಂತರ ಬಸ್ ನಿಲ್ದಾಣದ ಬಳಿ ಇದ್ದ ಆಟೋ ಚಾಲಕರ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ಸಾರ್ವಜನಿಕರಿಗೆ ಪೂರಕವಾದ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚಿಸಿದರು. ಈ ವೇಳೆ, ಪೊಲೀಸರು ಸಣ್ಣ ತಪ್ಪುಗಳಾದ ದಂಡ ವಿಧಿಸುವುದನ್ನು ನಿಲ್ಲಿಸಬೇಕು ಎಂದು ಆಟೋ ಚಾಲಕರು ಗೃಹ ಸಚಿವರಿಗೆ ಮನವಿ ಮಾಡಿದರು.