2ಎ ಮೀಸಲು ಕೇಳುವುದು ಸಂವಿಧಾನ ವಿರೋಧಿ ಕೆಲಸ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಪಂಚಮಸಾಲಿ ಸಮುದಾಯದ ಸ್ವಾಮೀಜಿಯವರ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಎಲ್ಲೆಡೆ ಪ್ರತಿಭಟನೆಗಳು ನಡೆದು ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಪರಿಷತ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರೋಕ್ಷವಾಗಿ ಪಂಚಮಸಾಲಿ ಸಮಯದಾಯಕ್ಕೆ 2ಎ ಮೀಸಲಾತಿ ನೀಡಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.

2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ಒತ್ತಾಯ ಮಾಡುತ್ತಿರುವುದು ಸಂವಿಧಾನ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಪಂಚಮಸಾಲಿ ಸಮುದಾಯದ ಹೋರಾಟಗಾರರ ಮೇಲೆ ಲಾಠಿಚಾರ್ಜ್​ ಮಾಡಿರುವ ಬಗ್ಗೆ ವಿಧಾನಪರಿಷತ್​ನಲ್ಲಿ ಉತ್ತರ ನೀಡುವ ವೇಳೆ ಸಿಎಂ ಸಿದ್ದರಾಮಯ್ಯ ಮೀಸಲಾತಿ ಬಗ್ಗೆ ಮಾತನಾಡಿದರು.

ರಾಜ್ಯದಲ್ಲಿ 2002ರಲ್ಲಿ ಮೀಸಲಾತಿ ವಿಭಾಗ ಆಯಿತು. ಆಗ ಯಾಕೆ ಪಂಚಮಸಾಲಿ ಮೀಸಲಾತಿ ಬೇಕು ಎಂದು ಒತ್ತಾಯ ಹಾಕಲಿಲ್ಲ? 2021-22ರಲ್ಲಿ ಪಂಚಮಸಾಲಿಗಳಿಗೆ ಮೀಸಲಾತಿ ಬೇಕು ಎಂದು ಚಳವಳಿ ಪ್ರಾರಂಭವಾಯಿತು. ಅಂದಿನ ಸರ್ಕಾರದಲ್ಲಿ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಈ ಹೋರಾಟ ಪ್ರಾರಂಭ ಮಾಡಿದ್ದು ಎಂದು ಹೇಳಿದರು.

ಬೊಮ್ಮಾಯಿ ಸರ್ಕಾರ 2ಸಿ ಮತ್ತು 2ಡಿ ಎಂದು ಹೊಸ ಮೀಸಲಾತಿ ವ್ಯವಸ್ಥೆ ಜಾರಿ ಮಾಡಿ ಒಕ್ಕಲಿಗರಿಗೂ ಮತ್ತು ಲಿಂಗಾಯತರಿಗೂ ಮುಸ್ಲಿಮರ 4% ಮೀಸಲಾತಿ ಕಡಿತ ಮಾಡಿ ತಲಾ 2% ಮೀಸಲಾತಿ ಕೊಟ್ಟಿದ್ದರು.
ಇದನ್ನ ವಿರೋಧಿಸಿ ರಾಘವೇಂದ್ರ ಎಂಬವರು ಕೋರ್ಟ್‌ನಲ್ಲಿ ಕೇಸ್ ಹಾಕಿದರು. ಆಗ ಬೊಮ್ಮಾಯಿ ಸರ್ಕಾರದಲ್ಲಿ ಅಧಿಕಾರಿಯಾಗಿದ್ದ ತುಳಿಸಿ ಮದ್ದನೇನಿ ನಾವು 2002ರಲ್ಲಿ ಆಗಿರುವ ಜಾತಿ ವಿಭಾಗಗಳ ಮೀಸಲಾತಿ ವಿಂಗಡನೆಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡೋದಿಲ್ಲ ಎಂದು ಅಫಿಡವಿಟ್ ಕೊಟ್ಟರು ಎಂದು ಸಿಎಂ ಅಫಿಡವಿಟ್ ಓದಿ ಹೇಳಿದರು.

ಬೊಮ್ಮಾಯಿ ಸರ್ಕಾರ ಮಾಡಿದ 2ಸಿ ಮತ್ತು 2ಡಿ ಯಾವ ಸಂವಿಧಾನ ಎಂದು ಗೊತ್ತಿಲ್ಲ. ಮುಸ್ಲಿಮರ 4% ಮೀಸಲಾತಿ ತೆಗೆದು ಒಕ್ಕಲಿಗ ಮತ್ತು ಲಿಂಗಾಯತರಿಗೆ ನೀಡಿದರು. ಮುಸ್ಲಿಮರ 4% ಬೊಮ್ಮಾಯಿ ಸರ್ಕಾರ ರದ್ದು ಯಾಕೆ ಮಾಡಿದರು? ಬೊಮ್ಮಾಯಿ ಸರ್ಕಾರದ 2ಸಿ ಮತ್ತು 2ಡಿ ವರ್ಗ ಮೀಸಲಾತಿ ವಿರೋಧಿಸಿ ಗುಲಾಂ ರಸೂಲ್ ಸುಪ್ರೀಂಕೋರ್ಟ್‌ಗೆ ಹೋದರು. ಅಲ್ಲಿ ಬೊಮ್ಮಾಯಿ ಸರ್ಕಾರ ಮುಂದಿನ ಆದೇಶದವರೆಗೂ 2ಸಿ ಮತ್ತು 2ಡಿ ಮೀಸಲಾತಿ ಜಾರಿ ಮಾಡಲ್ಲ ಎಂದು ಅಫಿಡವಿಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಿಎಂ ಮಾತಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟಿದ್ದು ಸರಿಯಲ್ಲ. ಪಂಚಮಸಾಲಿಗಳಿಗೆ ಮೀಸಲಾತಿ ಕೊಡಿ ಎಂದು ಪಟ್ಟು ಹಿಡಿದರು. ಈ ವೇಳೆ ಸದನದಲ್ಲಿ ಗದ್ದಲ ಗಲಾಟೆ ಆಯಿತು. ಆಡಳಿತ-ವಿಪಕ್ಷಗಳ ನಡುವೆ ಪರಸ್ಪರ ಘೋಷಣೆಗಳು ಕೂಗಿದರು. ವಿಪಕ್ಷಗಳ ನಾಯಕರು ಸದನದ ಬಾವಿಗಳಿದು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

- Advertisement -  - Advertisement - 
Share This Article
error: Content is protected !!
";