ಚಂದ್ರವಳ್ಳಿ ನ್ಯೂಸ್, ಓಮಾನ್:
ಓಮಾನ್ ದೇಶದಲ್ಲಿನ ಕನ್ನಡಿಗರೆಲ್ಲರೂ ಸೇರಿ ರಾಜಧಾನಿ ಮಸ್ಕತ್‌ನಲ್ಲಿ ಕನ್ನಡ ಭವನ ನಿರ್ಮಾಣ ಮಾಡಿಕೊಳ್ಳುವುದಾದರೆ, ಅದಕ್ಕೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಗಡಿನಾಡ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಹಾಗೂ ಒಮಾನ್ ಕನ್ನಡ ಪರ ಸಂಘಟನೆಗಳ ಘಟಕಗಳು ಮಸ್ಕತ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಸ್ಕತ್‌ನಲ್ಲಿ ಏರ್ಪಡಿಸಿದ್ದ ಮಸ್ಕತ್ ಗಡಿನಾಡ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಮಸ್ಕತ್ ನಿವೇಶನ ಲಭ್ಯವಾದರೆ ಅನುದಾನ ಪಡೆಯಲು ಸುಲುಭವಾಗುತ್ತದೆ. ಈ ಬಗ್ಗೆ ತಾವೇ ಖುದ್ದಾಗಿ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ನೆರವು ಕೊಡಿಸಲಾಗುವುದು ಎಂದು ಹೇಳಿದರು.
ಮರಳುಗಾಡಿನ ಈ ಓಮಾನ್ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿರುವ ಕನ್ನಡಿಗರ ನಾಡು ನುಡಿ ಮೇಲಿನ ಅಭಿಮಾನ, ಪ್ರೀತಿಗೆ ನಿಜಕ್ಕೂ ಹೃದಯ ತುಂಬಿ ಬಂದಿದೆ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಕನ್ನಡ ಮಕ್ಕಳಿಗೆ ಇಲ್ಲಿ ಕನ್ನಡ ಭಾಷೆಯನ್ನು ಉಚಿತವಾಗಿ ಪಾಠ ಮಾಡುತ್ತಿರುವ ಮಹಿಳಾ ಶಿಕ್ಷಕರನ್ನು ಗಡಿ ಪ್ರಾಧಿಕಾರದಿಂದ ಗುರುತಿಸಿ, ಸೂಕ್ತ ಗೌರವ ನೀಡುವುದಾಗಿ ತಿಳಿಸಿದರು. ಉಚಿತವಾಗಿ ಪಠ್ಯ ಪುಸ್ತಕ ಒದಗಿಸಲಾಗುವುದು ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ದೂರದ ದೇಶದಲ್ಲಿ ಕನ್ನಡ ಭಾಷೆಯನ್ನು ಉಳಿಸುವುದಷ್ಟೆ ಅಲ್ಲದೆ, ಕನ್ನಡ ಸಂಸ್ಕೃತಿಯನ್ನು ಬೆಳೆಸಲು ರಾಯಬಾರಿಗಳಂತೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಇಂಡಿಯಾ ಅಂಬಾಸಿಡರ್ ಜಿ.ವಿ.ಶ್ರೀನಿವಾಸ, ಒಮಾನ್ ವಿದೇಶಿ ವ್ಯವಹಾರಗಳ ಸಚಿವಾಲಯ ಅಧ್ಯಕ್ಷ ಖಾಲಿದ್ ಸಯ್ಯದ್ ಮೊಹಮ್ಮದ್, ಮಂಜೇಶ್ವರ ಶಾಸಕ ಎ.ಕೆ.ಎಂ. ಆಶ್ರ್, ನಾಡೋಜ ಡಾ.ಮನು ಬಳಿಗಾರ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸದಸ್ಯರಾದ ಎ.ಆರ್. ಸುಬ್ಬಯ್ಯಕಟ್ಟೆ, ಶಿವರೆಡ್ಡಿ, ಡಾ.ಸಂಜೀವ್ ಕುಮಾರ್ ಅತಿವಾಳೆ, ಕನ್ನಡ ಸಂಘದ ಶಿವಾನಂದ ಕೋಟ್ಯಾನ್, ಆಶ್ರ್ಶಾ ಮಂತುರ್, ಅಬೂಬಕ್ಕರ್ ರಾಯಲ್ ಬೋಳಾರ್, ಹ್ಯಾರಿಸ್ ಬೀರನ್, ಅಬ್ದುಲ್ ಲತ್ೀ ಉಪ್ಪಳ, ಅಮರೇಶ ಗಿರಡ್ಡಿ, ಮಲ್ಲಿಕಾರ್ಜುನ್ ಸಂಗೆಟ್ಟಿ ಭಾಗವಹಿಸಿದ್ದರು.
ಮಸ್ಕತ್‌ನಲ್ಲಿ ಕನ್ನಡ ಕಲಿಸುವ ಮಹಿಳಾ ಶಿಕ್ಷಕಿಯರನ್ನು ಸನ್ಮಾನ ಮಾಡಲಾಯಿತು. ತೀರ್ಥ ಕಟೀಲ್ ಮತ್ತು ತಂಡ ಹಾಗೂ ರೇಷ್ಠಾ ಹಿತೇಶ್ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಡೆಯಿತು. ಹಲವು ಪ್ರಕಾರದ ಕನ್ನಡ ಜಾನಪದ ನೃತ್ಯ, ವಚನ, ನೃತ್ಯ, ಆಟಿಕಳೆಂಜ ನೃತ್ಯ, ವೀರಗಾಸೆ, ಭರತ ನಾಟ್ಯವನ್ನು ಸ್ವತಃ ಮಸ್ಕತ್ ಕನ್ನಡಿಗರೇ ಪ್ರದರ್ಶಿಸಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯೂ ನಡೆಯಿತು.