ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾರ್ಮಿಕ ಕಲ್ಯಾಣ ಸಾಧನೆ ಸಮಾಜ ಕಲ್ಯಾಣದ ಒಂದು ಅಂಗ. ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣವನ್ನು ಸಂವರ್ಧನಗೊಳಿಸುವುದಕ್ಕೆ ಹಣಕಾಸು ನೆರವು ಒದಗಿಸಲು ಮತ್ತು ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ “ಕಾರ್ಮಿಕ ಕಲ್ಯಾಣ ನಿಧಿ”ಯನ್ನು ಸ್ಥಾಪಿಸಲಾಗಿದ್ದು ವಿವಿಧ ಯೋಜನೆಗಳ ಅನುಷ್ಠಾನದಿಂದ ಕಾರ್ಮಿಕರು ಹಾಗೂ ಅವರ ಕುಟುಂಬದವರ ಮೊಗದಲ್ಲಿ ಮಂದಹಾಸ ಕಾಣುತ್ತಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಸಂಘಟಿತ ಕಾರ್ಮಿಕರಿಗಾಗಿ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಮಂಡಳಿಗೆ ವಂತಿಗೆ ಪಾವತಿಸುವ ವಿವಿಧ ಕ್ಷೇತ್ರಗಳಾದ ಕಾರ್ಖಾನೆಗಳು, ಸಂಸ್ಥೆಗಳು, ಪ್ಲಾಂಟೇಶನ್, ಸಾರಿಗೆ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರ ಕ್ಷೇಮಾಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೊಳಿಸಿದೆ.
ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು:
ಕಾರ್ಮಿಕ ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರೋತ್ಸಾಹ ನೀಡಲು ಮಂಡಳಿಯು ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ ಯೋಜನೆಯಡಿಯಲ್ಲಿ ಪ್ರೌಢಶಾಲೆ, (8 ರಿಂದ 10ನೇ ತರಗತಿಯವರೆಗೆ) ರೂ. 6,000/- ಪಿಯುಸಿ/ ಡಿಪ್ಲೊಮಾ/ ಐಟಿಐ/ಟಿಸಿಹೆಚ್ ಶಿಕ್ಷಣಕ್ಕಾಗಿ ರೂ.8,000/- ಪದವಿ ಶಿಕ್ಷಣಕ್ಕಾಗಿ ರೂ.10,000/- ಸ್ನಾತಕೋತ್ತರ ಶಿಕ್ಷಣಕ್ಕಾಗಿ ರೂ. 12000/- ಇಂಜಿನಿಯರಿಂಗ್/ವೈದ್ಯಕೀಯ ಶಿಕ್ಷಣಕ್ಕಾಗಿ ರೂ.20,000/-ಗಳ ಪ್ರೋತ್ಸಾಹ ಧನ ನೀಡುತ್ತಿದೆ. ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಶೇ.50 ಹಾಗೂ ಪ.ಜಾ/ಪ.ಪಂಗಡದ ವಿದ್ಯಾರ್ಥಿಗಳು ಶೇ.45 ರಷ್ಟು ಅಂಕ ಪಡೆದು ತೇರ್ಗಡೆಯಾಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಸೌಲಭ್ಯ ಪಡೆಯಬಹುದು.
ಸಂಘಟಿತ ಕಾರ್ಮಿಕರಿಗೆ ಪ್ರೋತ್ಸಾಹ ಧನ ಸಹಾಯ:
ಮಂಡಳಿಗೆ ವಂತಿಕೆ ಪಾವತಿಸುವ ಸಂಘಟಿತ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ 2024-25ನೇ ಸಾಲಿನಲ್ಲಿ ಡಿಸೆಂಬರ್ 2024ರ ಅಂತ್ಯದವರೆಗೆ 14,948 ಫಲಾನುಭವಿಗಳಿಗೆ ರೂ.1289.48 ಲಕ್ಷಗಳ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯವನ್ನು ಪಡೆದಿದ್ದಾರೆ. ಕಾರ್ಮಿಕರಿಗೆ ವೈದ್ಯಕೀಯ ನೆರವು ಯೋಜನೆಯಡಿ 3 ಫಲಾನುಭವಿಗಳಿಗೆ ರೂ.62,358/-ಗಳು ಹಾಗೂ ಮಹಿಳಾ ಕಾರ್ಮಿಕರಿಗೆ ಮೊದಲ 2 ಮಕ್ಕಳಿಗೆ ಮಾತ್ರ ಹೆರಿಗೆ ಭತ್ಯೆ ಸೌಲಭ್ಯವನ್ನು ತಲಾ ರೂ. 10,000/- ಧನ ಸಹಾಯ ನೀಡಲಾಗುತ್ತಿದ್ದು, ಒಟ್ಟು 505 ಫಲಾನುಭವಿಗಳಿಗೆ ರೂ. 50.50 ಲಕ್ಷಗಳನ್ನು ಮಹಿಳಾ ಕಾರ್ಮಿಕರು ಹೆರಿಗೆ ಭತ್ಯೆ ಧನ ಸಹಾಯದ ಪ್ರಯೋಜನ ಪಡೆದಿದ್ದಾರೆ.
ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ:
ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ ಯೋಜನೆ ಸೌಲಭ್ಯ ಪಡೆಯಲು ಮೃತರ ಕುಟುಂಬದ ಅವಲಂಬಿತರು ಕಾರ್ಮಿಕ ಮೃತಪಟ್ಟ 6 ತಿಂಗಳೊಳಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ರೂ. 10,000/- ಧನ ಸಹಾಯ ನೀಡುತ್ತಾರೆ. 2024-25ನೇ ಸಾಲಿನಲ್ಲಿ ಡಿಸೆಂಬರ್ 2024ರ ಅಂತ್ಯದವರೆಗೆ ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ಒಟ್ಟು 275 ಫಲಾನುಭವಿಗಳಿಗೆ ರೂ. 27.50/- ಲಕ್ಷಗಳನ್ನು ಧನ ಸಹಾಯವಾಗಿ ನೀಡಿ ಕಾರ್ಮಿಕ ಕುಟುಂಬದ ಅವಲಂಬಿತರಿಗೆ ಮಂಡಳಿಯು ನೆರವಾಗಿದೆ.
ಕಾರ್ಮಿಕರಿಗೆ ವೈದ್ಯಕೀಯ ತಪಾಸಣೆ :
ಅಲ್ಲದೆ ಮಂಡಳಿಯು ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರ ಹಮ್ಮಿಕೊಳ್ಳುವ ಟ್ರೇಡ್ ಯೂನಿಯನ್/ಸಂಸ್ಥೆಗಳಿಗೆ ಧನಸಹಾಯ ಯೋಜನೆಯಡಿಯಲ್ಲಿ ನೋಂದಾಯಿತ ಕಾರ್ಮಿಕ ಸಂಘಟನೆಗಳು/ ಸರ್ಕಾರೇತರ ಸಂಸ್ಥೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ಹಮ್ಮಿಕೊಳ್ಳುವ ವಾರ್ಷಿಕ ಆರೋಗ್ಯ ತಪಾಸಣೆ ಶಿಬಿರಕ್ಕೆ ರೂ. 1,00,000/- ಧನ ಸಹಾಯ ನೀಡುತ್ತದೆ. 2024-25ನೇ ಸಾಲಿನ ಡಿಸೆಂಬರ್ 2024ರ ಅಂತ್ಯದವರೆಗೆ ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರ ಹಮ್ಮಿಕೊಂಡಿರುವ 1 ಟ್ರೇಡ್ ಯೂನಿಯನ್/ಸಂಸ್ಥೆಗಳಿಗೆ (110 ಫಲಾನುಭವಿಗಳು ಒಳಗೊಂಡAತೆ) ರೂ.1,00,000/-ಗಳನ್ನು ಧನ ಸಹಾಯವಾಗಿ ನೀಡಿದೆ.
ವಾರ್ಷಿಕ ಕ್ರೀಡಾ ಕೂಟ ಹಮ್ಮಿಕೊಳ್ಳುವ ನೊಂದಾಯಿತ ಕಾರ್ಮಿಕ ಸಂಘಗಳಿಗೆ ಧನಸಹಾಯ :
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ವಾರ್ಷಿಕ ಕ್ರೀಡಾ ಕೂಟ ಹಮ್ಮಿಕೊಳ್ಳುವ ನೊಂದಾಯಿತ ಕಾರ್ಮಿಕ ಸಂಘಗಳಿಗೆ ಧನಸಹಾಯ ನೀಡುತ್ತಿದೆ. ನೋಂದಾಯಿತ ಕಾರ್ಮಿಕ ಸಂಘಟನೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ವಾರ್ಷಿಕ ಕ್ರೀಡಾ ಕೂಟ ಹಮ್ಮಿಕೊಂಡಲ್ಲಿ ರೂ.1,00,000/- ಧನ ಸಹಾಯವನ್ನು ನೀಡುತ್ತದೆ. ಧನ ಸಹಾಯವನ್ನು ಫಲಾನುಭವಿಗಳ ಉಳಿತಾಯ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಜಮಾ ಮಾಡುತ್ತಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು, ಕಾರ್ಮಿಕ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹ, ವೈದ್ಯಕೀಯ ನೆರವು, ಮೃತ ಕಾರ್ಮಿಕ ಅಂತ್ಯ ಸಂಸ್ಕಾರ, ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ ವಿವಿಧ ಯೋಜನೆಗಳ ಮೂಲಕ ಕಾರ್ಮಿಕರ ಪ್ರಗತಿಗೆ ಸಹಕಾರಿಯಾಗಿದೆ.
ಲೇಖನ-ಆರ್. ಸ್ಮಿತಾ, ವಾರ್ತಾ ಸಹಾಯಕರು, ಬೆಂಗಳೂರು.

