ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಸತಿ ಇಲಾಖೆಯಲ್ಲಿ ಹಣ ನೀಡಿದವರಿಗಷ್ಟೇ ವಸತಿ ನಿಗಮದಲ್ಲಿ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಆಳಂದ ಶಾಸಕ ಬಿಆರ್ ಪಾಟೀಲ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು, ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫ ರಾಜ್ ಖಾನ್ ಅವರಿಗೆ ಫೋನ್ ಮಾಡಿ ತಮ್ಮದೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಶಾಸಕ ಬಿ.ಆರ್ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವೈರಲ್ ಆಡಿಯೋದಲ್ಲಿ ಏನಿದೆ?
ಶಾಸಕ ಬಿಆರ್ ಪಾಟೀಲ್, ಸಚಿವ ಜಮೀರ್ ಖಾನ್ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ, ಸರ್ಕಾರಿ ಮನೆಗಳ ಹಂಚಿಕೆಗೆ ಲಂಚ ಪಡೆಯುತ್ತಿರುವ ಬಗ್ಗೆ ಆರೋಪಿಸಿದ್ದಾರೆ. ಹಣ ನೀಡಿದವರಿಗಷ್ಟೇ ವಸತಿ ನಿಗಮದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಯಾವ ಕ್ಷೇತ್ರದಲ್ಲಿ ಹೀಗೆ ಆಗಿದೆ ಮಾಹಿತಿ ನೀಡಿ. ಕೊಡಲೇ ಕ್ರಮಕೈಗೊಳ್ಳುವುದಾಗಿ ಜಮೀರ್ ಖಾನ್ ಆಪ್ತ ಕಾರ್ಯದರ್ಶಿ ಹೇಳಿದ್ದಾರೆ. ಆಳಂದ ಮತ್ತು ಅಫಜಲಪುರ ಕ್ಷೇತ್ರ ಸೇರಿದಂತೆ ಹಲವೆಡೆ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಿರುವ ಆಡಿಯೋ ವೈರಲ್ ಆಗಿದ್ದು ಇದರಲ್ಲಿ ಈ ಆರೋಪಗಳು ಕೇಳಿ ಬಂದಿವೆ.
ಸಿಎಂ ಭೇಟಿಗೆ ಮುಂದಾದ ಶಾಸಕ ಬಿ.ಆರ್.ಪಾಟೀಲ್-
ತಾವು ಮಾತನಾಡಿರುವ ಆಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಲು ಶಾಸಕ ಬಿ.ಆರ್.ಪಾಟೀಲ್ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ಸಿಎಂ ಬಳಿ ಸಮಯ ಕೇಳಿದ್ದು, ಬಳಿಕ ಭೇಟಿ ಮಾಡುವ ಸಾಧ್ಯತೆ ಇದೆ. ಆ ಮೂಲಕ ವೈರಲ್ ಆಡಿಯೋ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.