ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಟೋಲಿವ್ ಸಂಸ್ಥೆ ಆಸಕ್ತಿ ತೋರಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಆಟೋಲಿವ್(Autoliv) ಸ್ವೀಡನ್ ನ ಪ್ರಮುಖ ವಾಹನ ಭದ್ರತಾ ಉಪಕರಣಗಳ ತಯಾರಕ ಸಂಸ್ಥೆಯಾಗಿದ್ದು, ಸೀಟುಬೆಲ್ಟ್’ಗಳು ಮತ್ತು ಏರ್’ಬ್ಯಾಗ್’ಗಳಂತಹ ಜೀವರಕ್ಷಕ ತಂತ್ರಜ್ಞಾನಗಳಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವರು ಹೇಳಿದರು.
ಆಟೋಲಿವ್ ಸಂಸ್ಥೆಯ ಸಂವಹನ ಮುಖ್ಯಸ್ಥೆ ಗ್ರೇಬಿಯೆಲ್ಲಾ ಎಟೆಮಡ್, ವ್ಯಾಪಾರಾಭಿವೃದ್ಧಿ ಉಪಾಧ್ಯಕ್ಷ ಅಲೆಕ್ಸಾಂಡರ್ ಕ್ಯಾಂಪ್ಬೆಲ್ ವಿಲ್ಸನ್ ಅವರನ್ನು ಭೇಟಿಯಾಗಿ ವ್ಯಾವಹಾರಿಕ ಸಂವಾದ ನಡೆಸಲಾಯಿತು ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ಅವರು ತಮ್ಮ ಜಾಗತಿಕ ಭದ್ರತಾ ದೃಷ್ಟಿಕೋನವನ್ನು ಹಂಚಿಕೊಂಡು, ಭಾರತದಲ್ಲಿ ಬೆಂಗಳೂರನ್ನು ತಮ್ಮ ಪ್ರಮುಖ ಕೇಂದ್ರವಾಗಿ ಗುರುತಿಸಿದರು. ಮೋಟಾರ್ ಸೈಕಲ್ ಏರ್’ಬ್ಯಾಗ್’ಗಳು ಹಾಗೂ ಉನ್ನತ ಭದ್ರತಾ ತಂತ್ರಜ್ಞಾನಗಳ ಮೇಲೆ ಗಮನವಿರಿಸಿ, ಭಾರತೀಯ ಮಾರುಕಟ್ಟೆಯಲ್ಲಿ ಅಪಾರ ಅವಕಾಶವಿದೆ ಎಂದು ಭಾವಿಸಿದ್ದಾರೆಂದು ಸಚಿವರು ತಿಳಿಸಿದರು.
ಕರ್ನಾಟಕದಲ್ಲಿ ಅವರ ಮುಂದಿನ ಹೂಡಿಕೆ ಮತ್ತು ವಿಸ್ತರಣೆ ಯೋಜನೆಗಳಿಗೆ ಕರ್ನಾಟಕ ಸರ್ಕಾರದಿಂದ ಸಂಪೂರ್ಣ ಬೆಂಬಲವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ ಎಂದು ಕೈಗಾರಿಕೆ ಸಚಿವ ಪಾಟೀಲ್ ತಿಳಿಸಿದರು.