ಬಿಡಾಡಿ ದನಗಳ ಹಾವಳಿ ತಪ್ಪಿಸಿ ಜನರ ಜೀವ ಉಳಿಸಿ

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದಾದ್ಯಂತ ಕಳೆದ ಕೆಲವು ದಿನಗಳಿಂದ ಬಿಡಾಡಿ ದನಗಳ ಹಾವಳಿ ಹೆಚ್ಚಿದ್ದು ರಸ್ತೆ ಸೇರಿದಂತೆ ಸಿಕ್ಕ ಸಿಕ್ಕಲ್ಲಿ ದನಗಳು ಮಲಗುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸಿ ಜೀವಕ್ಕೆ ಹಾನಿಯಾಗುತ್ತಿದ್ದು ಕೂಡಲೇ ನಗರಸಭೆಯವರಾಗಲಿ ಅಥವಾ ದನಗಳ ಮಾಲೀಕರಾಗಲಿ ಬಿಡಾಡಿ ದನಗಳನ್ನು ಬೇರೆಡೆ ಸ್ಥಳಾಂತರಿಸಬೇಕಾಗಿದೆ. 

ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪ್ರತಿ ನಿತ್ಯವೂ ಈ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಿ ಅವುಗಳನ್ನು ನಗರದಿಂದ ಬೇರೆಡೆ ಸ್ಥಳಾಂತರ ಮಾಡಬೇಕಾದ ನಗರಸಭೆಗೆ ಮಾತ್ರ ನಿದ್ರೆಗೆ ಜಾರಿದ್ದು, ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಕೆಲವು ತಿಂಗಳುಗಳಿಂದ ಇವುಗಳ ಉಪಟಳ ಹೇಳ ತೀರದಂತಾಗಿದ್ದು, ಮಕ್ಕಳು, ವಯೋವೃದ್ಧರು ರಸ್ತೆಯಲ್ಲಿ ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಡಾಡಿ ದನಗಳು ಹಿಂಡು ಹಿಂಡಾಗಿ ರಸ್ತೆಯ ಮಧ್ಯದಲ್ಲಿಯೇ ಮಲಗುವುದು ಹಾಗೂ ಒಂದಕ್ಕೊಂದು ಹಾಯುತ್ತಾ ರಸ್ತೆಯಲ್ಲೇ ಕಾದಾಡಲು ಪ್ರಾರಂಭಿಸಿದರೆ ಆ ರಸ್ತೆಯಲ್ಲಿ ಸಂಚಾರವೇ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಈಗಾಗಲೇ ಹಲವರು ರಸ್ತೆಯಲ್ಲಿ ಬಿಡಾಡಿ ದನಗಳ ಕಾದಾಟದಿಂದ ಗಾಯಗೊಂಡ ಪ್ರಕರಣಗಳು ವರದಿಯಾಗಿವೆ.

ಬಿಡಾಡಿ ದನಗಳ ಸಮಸ್ಯೆ: ಬಿಡಾಡಿ ದನಗಳ ಸಮಸ್ಯೆ ಕೇವಲ ಒಂದು ಪ್ರದೇಶದಲ್ಲಿ ಮಾತ್ರವಲ್ಲ, ನಗರದ ಪ್ರಮುಖ ಸ್ಥಳಗಳಾದ ಮಹಾತ್ಮಾ ಗಾಂಧಿವೃತ್ತ, ಪೊಲೀಸ್ ಸ್ಟೇಶನ್ ಮುಂಭಾಗ, ಟಿಟಿ ರೋಡ್, ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣಗಳು, ನೆಹರು ಮೈದಾನ, ಹುಳಿಯಾರ್ ರಸ್ತೆ, ಟಿಬಿ ಸರ್ಕಲ್ ಮತ್ತಿತರ ಸಂಪರ್ಕ ಕಲ್ಪಿಸುವ ಪ್ರಮುಖ ಕೂಡು ರಸ್ತೆಗಳು, ಸಾರ್ವಜನಿಕ ಆಸ್ಪತ್ರೆಯ ಮುಂಭಾಗ, ಸೇರಿದಂತೆ ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳಿಂದ ತುಂಬಿ ಹೋಗಿದ್ದು, ಜನತೆಗೆ ವಾಹನ ಸಂಚಾರ ಮಾಡುವುದೇ ದುಸ್ತರವಾಗುತ್ತಿದೆ.

ಸವಾರರಿಗೆ ತೊಂದರೆ: ನಗರದಲ್ಲಿರುವ ಬಿಡಾಡಿ ದನಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವುದು ಒಂದೆ ಕಡೆಯಾದರೆ ನಿತ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಸ್ಥಿತಿಯಂತೂ ಹೇಳತೀರದಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿರುವ ಬಿಡಾಡಿ ದನಗಳು ವಾಹನಗಳ ಶಬ್ದ ಕೇಳುತ್ತಿದ್ದಂತೆಯೇ ರಸ್ತೆಯ ಅಕ್ಕಪಕ್ಕದುದ್ದಕ್ಕೂ ಅಡ್ಡದಿಡ್ಡಿಯಾಗಿ ಓಡಾಡುತ್ತವೆ.

ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿವೆ. ಇನ್ನು ಬಿಡಾಡಿ ದನಗಳು ರಸ್ತೆಯಲ್ಲಿ ಸಂಚರಿಸುವ ಸವಾರರಿಗೆ ಹಾಯ್ದು ಕೆಳಗೆ ಬೀಳಿಸಿದ ಘಟನೆಗಳು ಸಾಕಷ್ಟು ನಡೆದಿವೆ. ಇಷ್ಟಾದರೂ ನಗರಸಭೆಯು ಈ ಬಿಡಾಡಿ ದನಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೆಚ್.ನಾಗರಾಜ್ ಬೇಸರ ವ್ಯಕ್ತ ಪಡಿಸಿದ್ದಾರೆ.

“ರಾತ್ರೋ ರಾತ್ರಿ ಬಿಡಾಡಿ ದನಗಳನ್ನು ಪಳಗಿಸಿ ಹಿಡಿದುಕೊಂಡು ಹೋಗುವ ಕಳ್ಳರು ಒಂದು ಕಡೆ ಇದ್ದು ಬಿಡಾಡಿ ದನಗಳಿಗೆ ನಿಯಂತ್ರಮ ಮಾಡಿದರೆ ಎಲ್ಲವನ್ನು ತಪ್ಪಿಸಿದ ಕೀರ್ತಿ ನಗರಸಭೆಗೆ ಬರಲಿದೆ”. ಹೆಚ್.ನಾಗರಾಜ್, ಸಮಾಜ ಸೇವಕ, ಹಿರಿಯೂರು.

 

- Advertisement -  - Advertisement -  - Advertisement - 
Share This Article
error: Content is protected !!
";