ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ- ನ್ಯಾ.ವಿಜಯ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಗ್ರಾಮೀಣ ಭಾಗದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಸೂಚನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾಸ್ಪತ್ರೆ ಹಾಗೂ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ, ಶನಿವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ತಂಬಾಕು ಸೇವನೆ ಪರಿಣಾಮದಿಂದ ಕ್ಯಾನ್ಸರ್‌ಗೆ ತುತ್ತಾಗಿ, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದನ್ನು ತಪ್ಪಿಸಲು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗಳಲ್ಲಿ ಜಾಗೃತಿ ಮೂಡಿಸಬೇಕು. ಕೋಟ್ಪಾ ಕಾಯ್ದೆಯಡಿ ನಿಯಮ ಬಾಹೀರವಾಗಿ ತಂಬಾಕು ಮಾರಾಟ ಮಾಡುವವರ ವಿರುದ್ದ ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡಬೇಕು ಎಂದು ನ್ಯಾ.ಎಂ.ವಿಜಯ್ ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆಯಿಂದ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿಕ್ಕವಯಸ್ಸಿನ ವಿದ್ಯಾರ್ಥಿಗಳು ಸಹ ಕ್ಯಾನ್ಸರ್‌ಗೆ ತುತ್ತಾಗುತ್ತಿರುವುದು ದುಃಖದ ಸಂಗತಿಯಾಗಿದೆ. ತಂಬಾಕು ಉತ್ಪನ್ನಗಳಲ್ಲಿ ಕಂಪನಿಗಳು ಬೆರಸುವ ರಾಸಾಯನಿಕಗಳ ಪರಿಣಾಮವಾಗಿ ತಂಬಾಕು ಸೇವೆನೆ ವ್ಯಸನವಾಗಿ ಪರಿಣಮಿಸುತ್ತಿದೆ. ಗುಟುಕಾ ಸೇವಿಸುವ ಯುವಕರಲ್ಲಿ ಆರಂಭದಲ್ಲಿ ನಾಲಿಗೆಯ ರುಚಿ ಗ್ರಹಣ ಸಂವೇದನೆ ಇಲ್ಲದಂತೆ ಆಗುತ್ತದೆ. ಆಹಾರ ಸೇವನೆಯು ದುಸ್ತರವಾಗುತ್ತದೆ. ಕೆಲ ವರ್ಷಗಳ ತರುವಾಯ ಇದು ಕ್ಯಾನ್ಸರ್ ಆಗಿ ಮಾರ್ಪಡುತ್ತದೆ. ಆರೋಗ್ಯ ಕಾರ್ಯಕರ್ತೆಯರು ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ತಂಬಾಕು ಸೇವನೆ ತ್ಯಜಿಸಿದರೆ ಆರೋಗ್ಯವಂತರಾಗಿ ಜೀವಿಸಬಹುದು ಎಂದರು.

ಶಿವಮೊಗ್ಗದ ಮಲ್ನಾಡು ಕ್ಯಾನ್ಸರ್ ಆಸ್ಪತ್ರೆಯ ಡಾ.ಸಚಿನ್ ಕೊಟ್ಟೂರು ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ, 1987 ರಲ್ಲಿ ವಿಶ್ವ ಸಂಸ್ಥೆ ಏಪ್ರಿಲ್ 7 ಅನ್ನು ಧೂಮಪಾನ ನಿಷೇಧ ದಿನವನ್ನಾಗಿ ಘೋಷಿಸಿತು. ನಂತರದಲ್ಲಿ ಮೇ 31ನ್ನು ತಂಬಾಕು ರಹಿತ ದಿನವಾಗಿ ಆಚರಿಸುತ್ತಾ ಬರಲಾಗುತ್ತಿದೆ. ತಂಬಾಕು ಉದ್ದಿಮೆದಾರರು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅನುಸರಿಸುತ್ತಿರುವ ತಂತ್ರಗಳನ್ನು ಬಯಲು ಮಾಡುವ ದೃಷ್ಟಿಯಿಂದ ವಿಶ್ವ ಸಂಸ್ಥೆ ಅನ್‌ಮಾಸ್ಕಿಂಗ್ ದ ಅಪೀಲ್ಎಂದು ಈ ಬಾರಿಯ ಘೋಷವಾಕ್ಯವನ್ನು ಹೆಸರಿಸಿದೆ.

ಜಗತ್ತಿನಾದ್ಯಂತ 16,000ಕ್ಕೂ ಅಧಿಕ ಸ್ವಾಧಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. 340 ಕೋಟಿ ಅಧಿಕ ಜನರು ಒಂದಲ್ಲಾ ಒಂದು ರೂಪದಲ್ಲಿ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಿದ್ದಾರೆ. 13 ರಿಂದ 15 ವರ್ಷದ ಒಳಗಿನ 3.70 ಕೋಟಿ ಮಕ್ಕಳು ಜಾಗತಿಕವಾಗಿ ತಂಬಾಕು ವ್ಯಸನಿಗಳಾಗಿ ಮಾರ್ಪಟ್ಟಿದ್ದಾರೆ.

ತಂಬಾಕು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್, ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಉಂಟಾಗುತ್ತವೆ. ವಿಶ್ವದ್ಯಾಂತ ಪ್ರತಿ ವರ್ಷ 8.7 ಕೋಟಿ ಜನರು ಇವುಗಳಿಂದ ಮೃತಪಡುತ್ತಿದ್ದಾರೆ. 65,000 ಮಕ್ಕಳು ಸಾವನ್ನಪುತ್ತಿದ್ದಾರೆ.

ಗರ್ಭಿಣಿಯರಲ್ಲಿ ತಂಬಾಕು ಸೇವನೆಯಿಂದ ಅವಧಿಗೆ ಮುನ್ನವೇ ಹೆರಿಗೆ, ಕಡಿಮೆ ತೂಕದ ಮಕ್ಕಳ ಜನನವಾಗುತ್ತಿದೆ. ಜನಸಿದ ಶಿಶುಗಳ ಬೆಳವಣಿಗೆ ತಂಬಾಕು ಮಾರಕವಾಗಿದೆ. ಭಾರತದಲ್ಲಿ ಅತ್ಯಧಿಕವಾಗಿ ತಂಬಾಕು ಉತ್ಪನ್ನಗಳನ್ನು ಬಳಸಲಾಗುತ್ತದೆ. ಇದು ಕ್ಯಾನ್ಸರ್ ರೋಗಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇಸಿಗರೇಟ್ ಉತ್ಪನ್ನಗಳು ಸಹ ಮಾರುಕಟ್ಟೆ ಬಂದಿವೆ. ಭಾರತದಲ್ಲಿ ಇವುಗಳಿಗೆ ನಿಷೇಧ ಹೇರಲಾಗಿದೆ. ಯುವಕರು ತಂಬಾಕು ವ್ಯಸನಗಳಿಗೆ ಬಲಿಯಾದಂತೆ ಎಚ್ಚರ ವಹಿಸಬೇಕು ಎಂದರು.

ನಗರದಲ್ಲಿ ಜಾಗೃತಿ ಜಾಥ : ತಂಬಾಕು ರಹಿತ ದಿನದ ಅಂಗವಾಗಿ ಶನಿವಾರ ಬೆಳಿಗ್ಗೆ 9 ಗಂಟೆಗೆ ನಗರದ ಜಿಲ್ಲಾಸ್ಪತ್ರೆ ಬಳಿ ಜಾಗೃತಿ ಜಾಥಕ್ಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಚಾಲನೆ ನೀಡಿದರು. ಜಾಥಾದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು. ಜಿಲ್ಲಾಸ್ಪತ್ರೆಯಿಂದ ಜೋಗಿಮಟ್ಟಿ ರಸ್ತೆ ಮಾರ್ಗವಾಗಿ ಜಾಥ ಜಿಲ್ಲಾ ಪಂಚಾಯಿತಿ ತಲುಪಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಜಾಥದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿ ಮಠ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎನ್.ಪ್ರಭುದೇವ, ಮಲ್ನಾಡು ಆಸ್ಪತ್ರೆಯ ಡಾ.ಅನಿಲ್.ಸಿ.ಪಿ ಸೇರಿದಂತೆ ಮತ್ತಿರರು ಉಪಸ್ಥಿರಿದ್ದರು.

Share This Article
error: Content is protected !!
";