ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪರಿಸರ ದಿನಾಚರಣೆಯ ಅಂಗವಾಗಿ ನವೋದಯ ಚಾರಿಟೆಬಲ್ ಟ್ರಸ್ಟ್ನ ನವೋದಯ ಗ್ರಾಮೀಣ ಆರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರ ದ ವತಿಯಿಂದ ಮಾರುತಿ ಪ್ರೌಢ ಶಾಲೆ ರಾಜಘಟ್ಟ ಹಾಗೂ ಎಸ್ ಜೆ ಸಿ ಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಹಾವುಗಳ ಬಗ್ಗೆ ವೈಜ್ಞಾನಿಕ ತಿಳಿವಳಿಕೆ ನೀಡುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ಹರಿಣಿ ಮತ್ತು ಡಾ. S ಪರಮೇಶ್ವರ ಅವರು ತರ‍್ತು ಪರಿಸ್ಥಿತಿಗಳಲ್ಲಿ ನೀಡಬೇಕಾದ ಪ್ರಾಥಮಿಕ ಚಿಕಿತ್ಸೆಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಜೊತೆಗೆ ಆಸ್ಪತ್ರೆಗಳ ವಿವಿಧ ವಿಭಾಗಗಳ ಕರ‍್ಯವಿಧಾನ ಮತ್ತು ಸಮಯಕ್ಕೆ ಸರಿಯಾಗಿ ಔಷಧೋಪಚಾರ ಪಡೆಯುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.
ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾದ ಲೋಹಿತ್ ವೈ ಟಿ ಹಾವುಗಳ ಬಗ್ಗೆ ಸಮಗ್ರ ಉಪನ್ಯಾಸ ನೀಡಿ, ವಿಷಕಾರಿ ಹಾಗೂ ವಿಷರಹಿತ ಹಾವುಗಳ ನಡುವಿನ ವ್ಯತ್ಯಾಸ, ಅವುಗಳ ಜೀವನಶೈಲಿ, ಜನರಲ್ಲಿ ಇರುವ ತಪ್ಪು ಕಲ್ಪನೆಗಳು ಮತ್ತು ವೈಜ್ಞಾನಿಕ ನಿಜಾಂಶಗಳು, ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕಾಣುವ ಹಾವುಗಳನ್ನು ಗುರುತಿಸುವ ವಿಧಾನಗಳನ್ನು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ೨೦೦ ವಿದ್ಯಾರ್ಥಿಗಳು, ನವೋದಯ ಟ್ರಸ್ಟ್ ಸಂಯೋಜಕರಾದ ಜನರ‍್ಧನ್ , ಮಾರುತಿ ಪ್ರೌಢ ಶಾಲೆ ಪ್ರಾಂಶುಪಾಲರಾದ ಪವನಾ, ಮುಖ್ಯೋಪಾಧ್ಯಾಯರಾದ ಕೃಷ್ಣಮೂರ್ತಿ
ಬಿಜೆಸಿಎಸ್ ಸಂಸ್ಥೆಯ ಪ್ರಾಂಶುಪಾಲರಾದ ವಿಜಯಕುಮಾರ್ ಸುರನಾ ಕಾಲೇಜಿನ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಾ ಬಿ.ಕೆ., ಪ್ರೇರಣಾ ವಿ. ಮತ್ತು ವೈಷ್ಣವಿ ಎಂ. ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ಈ ಜಾಗೃತಿ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿಷ ಪರಿಸರ ಸಂರಕ್ಷಣೆ, ಹಾವುಗಳ ಬಗ್ಗೆ ವೈಜ್ಞಾನಿಕ ಅರಿವು ಮತ್ತು ತರ‍್ತು ಪರಿಸ್ಥಿತಿಗಳಲ್ಲಿ ಜಾಗೃತ ಸ್ಪಂದನೆ ಮಾಡುವ ಸಾರ‍್ಥ್ಯದತ್ತ ಗಮನ ಸೆಳೆದಿತ್ತು.