ಬಾ ಗಾಂಧಿ, ನೀನು ಖಂಡಿತ ಬರಬೇಕು..

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾ ಗಾಂಧಿ
——————-
ನೀನು ಖಂಡಿತ ಬರಬೇಕು
ಈ ನೆಲದ ಓಣಿಗಳಲಿ
ಸುಟ್ಟು ಕರಕಲಾದ
ಶವಗಳೊಂದಿಗೆ ನಿನ್ನ ಸಂವಾದವಿದೆ

ಮುಗ್ಧರ ತಲೆ ಸಿಡಿಸಿದ
ಬಂದೂಕುಗಳ ನೋಡಬೇಕಿದೆ
ಆಳಕ್ಕೂ ಅಗಲಕ್ಕರಡಿದ
ಧರ್ಮ ಬಿಳಿಲಿಗೆ ನೇತಾಡುವ
ಪ್ರೇತಗಳ ಕುರಿತು ಹೇಳಬೇಕಿದೆ

ಅಬಲೆ ಹಸುಳೆಯರ
ಚೀರಾಟದ ನಗ್ನ ಸತ್ಯವಿದೆ
ಮಂತ್ರಿ ಮೊಹೋದಯರಿಂದ
ಹೆಣಕ್ಕೊಂದು ಹಾರವಿದೆ

 ಲಕ್ಷ್ಯವಿಲ್ಲದ
ಜೀವಕ್ಕೊಂದೊಂದು ಲಕ್ಷವಿದೆ
ಮೊಸಳೆ ಕಣ್ಣೀರಲಿ ಫೋಟೋ ಕ್ಲಿಕ್ಕಿಸಿಕೊಳ್ಳುವವರ
ನೀ ನೋಡಬೇಕಿದೆ
ವೀಕ್ಷಕನಾಗಿ ಬಾ

ಮಾರಿಯ ತೋರಣದ ಹೆಬ್ಬಾಗಿಲಿಗೆ
ಹರಕೆಯ ಕುರಿಗಳಾಗಿದ್ದೇವೆ
ಮತ್ತಾವ ಶುಭದಿನ ನಮ್ಮ ಬಲಿಯೋ
ತಡೆಯುವುದಕ್ಕಾದರೂ ಬಾ
ನಮ್ಮತ್ತ ಕಣ್ಣೆತ್ತಿಯೂ ನೋಡದ ಕಾನೂನುಗಳ ಕಟ್ಟಿ ಬಿಡಬೇಕು

ಬುದ್ಧ ಬಸವ ಭೀಮರೊಡಗೂಡಿ ಬಾ
ಬಾ ಗಾಂಧಿ
ನೀನು ಖಂಡಿತ ಬರಬೇಕು
ನಿನ್ನ ಎದೆ ಬಗೆದವರೇನಾದರೂ
ಬಂದಾರೆಂಬ ಭಯವೇ

ಯೋಚಿಸದೆ ಬಾ
ನಿನ್ನ ಬಳಿ ಮತ್ತವರನ್ನ
ಸುಳಿಯಲು ಬಿಡುವುದಿಲ್ಲ
ಕೋವಿಗಳು ನಮ್ಮೆದೆ ಬಗೆದರೆನಂತೆ

ಮತ್ತಷ್ಟು ನಮ್ಮವರ ಶವಗಳು ಸುಟ್ಟು ಕರಕಲಾದರನಂತೆ
ನಾವಿದ್ದೇವೆ ನಿನ್ನೊಂದಿಗೆ
ಆ ದಿನಗಳ ಹೊತ್ತು ಬಾ
ಕವಿತೆ
:ಕುಮಾರ್ ಬಡಪ್ಪ, ಚಿತ್ರದುರ್ಗ.

 

- Advertisement - 
Share This Article
error: Content is protected !!
";