ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೆಲುಗು ಚಿತ್ರರಂಗದ ಖ್ಯಾತ ಖಳನಟ ಪ್ರಭಾಕರ್ ಆರ್. ಕೆ. ಗಾಂಧಿ ಅವರ ನಿರ್ದೇಶನದ ಮುಗಿಲ ಮಲ್ಲಿಗೆ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಕೃಷ್ಣ ಅವರ ಅಖಂಡ, ಅಲ್ಲು ಅರ್ಜುನ್ ಅವರ ಡಿ.ಜೆ, ರಾಮ್ ನಟನೆಯ ಸ್ಕಂದ ಅಲ್ಲದೆ ವಿಶಾಲ್, ವಿಜಯ್ ಸೇತುಪತಿ, ವಿಜಯ್ ದಳಪತಿಯೊಂದಿಗೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸುವ ಜೊತೆಗೆ ಕನ್ನಡದ ನಟಸಾರ್ವಭೌಮ, ಗಜಕೇಸರಿ, ಬಿಚ್ಚುಗತ್ತಿ, ಬೃಂದಾವನ, ಮೊದಲಾದ ಚಿತ್ರಗಳಲ್ಲೂ ಸಹ ನಟಿಸಿರುವ ಬಾಹುಬಲಿಯ ಕಾಲಕೇಯ ಎಂದೇ ಹೆಸರಾದ ಪ್ರಭಾಕರ್ ಅವರು
“ಮುಗಿಲ ಮಲ್ಲಿಗೆ” ಚಿತ್ರದ ಮೂಲಕ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಖಳನಾಯಕನ ಪಾತ್ರಗಳಿಗಷ್ಟೇ ಸೀಮಿತವಾಗಿದ್ದ ಪ್ರಭಾಕರ್ ಅವರು “ಮುಗಿಲ ಮಲ್ಲಿಗೆ” ಸಿನಿಮಾದಲ್ಲಿ ಸೆಂಟಿಮೆಂಟ್ ದೃಶ್ಯಗಳ ಜೊತೆಗೆ ಹಾಡೊಂದಕ್ಕೆ ಜೀವ ತುಂಬಿ ನಟಿಸಿರುವುದು ವಿಶೇಷ,
“ಜೀವಿ ಜೀವಿಗಳ ನಡುವೆ ಪ್ರೀತಿ ಇಲ್ಲದ ಮೇಲೆ ಜೀವಿ ಜೀವದ ಅಸೆ ಬಿಡಲೇಬೇಕು” ಎಂಬ ಆರ್. ಕೆ. ಗಾಂಧಿ ಅವರ ಸಾಹಿತ್ಯ ಹಾಗೂ ಅನಿರುದ್ಧ ಶಾಸ್ತ್ರಿ ರವರ ಸಂಗೀತದಲ್ಲಿ ಮೂಡಿ ಬಂದಿರುವ
ಅರ್ಥಗರ್ಭಿತ ಹಾಡೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡ ಪ್ರಭಾಕರ್ ಆ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಈ ಹಾಡಿನ ಜೊತೆಗೆ ಎಂ. ಸತ್ಯವಾರ, ಮುತ್ತುಸಂದ್ರದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪ್ರಭಾಕರ್ ಮತ್ತು ಮೋನಿಕ ಕಿರಣ್ ಕುಮಾರ್ ನಟನೆಯ ಹಲವು ದೃಶ್ಯಗಳನ್ನು ಚಿತ್ರಿಕರಿಸಲಾಯಿತು.
ಎ ಎನ್ ಆರ್ ಪಿಕ್ಚರ್ಸ್ ಬ್ಯಾನರ್ ನ ಅಡಿಯಲ್ಲಿ ಎ.ನಾಗರಾಜ್ ರೆಡ್ಡಿ ಅವರು ನಿರ್ಮಿಸುತ್ತಿರುವ ಮುಗಿಲ ಮಲ್ಲಿಗೆ ಚಿತ್ರಕ್ಕೆ ಆರ್ ಕೆ ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಹೊಸಕೋಟೆ ಸುತ್ತ ಮುತ್ತಲಿನ ಕಂಬಳಿಪುರ ಕಾಟೇರಮ್ಮ, ಕೊಳತೂರು, ಭಕ್ತರಹಳ್ಳಿ. ಗಟ್ಟಿಗನಬ್ಬೆ, ಪೂಜೇನ ಅಗ್ರಹಾರ ಮೊದಲಾದ ಲೊಕೇಶನ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಅಭಿನಂದನ್ ಶೆಟ್ಟಿ ಅವರ ಛಾಯಾಗ್ರಹಣ. ಅನಿರುದ್ಧ ಶಾಸ್ತ್ರಿ ಅವರ ಸಂಗೀತ, ರಾಜೀವ್ ಕೃಷ್ಣ ಅವರ ಸಾಹಿತ್ಯ .ವಿನಯ್ ಜಿ ಆಲೂರು ಅವರ ಸಂಕಲನ , ಥ್ರಿಲ್ಲರ್ ಮಂಜು ಅವರ ಸಾಹಸ, ಮೋಹನ್ ಕುಮಾರ್ ಅವರ ಪ್ರಸಾದನ, ಮಲ್ಲಿಕಾರ್ಜುನ ಅವರ ಕಲಾ ನಿರ್ದೇಶನ, ಪ್ರವೀಣ್ ಭದ್ರಾವತಿ, ವಿ ಮುರುಗನ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.
ಪ್ರಮುಖ ತಾರಾಗಣದಲ್ಲಿ ಥ್ರಿಲ್ಲರ್ ಮಂಜು, ಭವ್ಯಾ, ಸನತ್, ಸಹನ ಚಂದ್ರಶೇಖರ್, ಶಂಕನಾದ ಆಂಜಿನಪ್ಪ, ಅನ್ನಪೂರ್ಣ, ಎಂ. ವಿ. ಸಮಯ್, ಕಿಶೋರ್ ಕುಂಬ್ಳೆ, ಕಾಸರಗೋಡು, ಸಿದ್ದಯ್ಯ ಎಸ್ ಹೀರೇಮಠ್, ವಸಂತ ನಾಯಕ್, ಜಯರಾಂ, ಶಂಕರ್ , ರಾಜೇಶ್, ಕಿರಣ್ ಗಟ್ಟಿಗನಬ್ಬೆ, ಮೋನಿಕಾ, ನಾಗರಾಜ್ ಆಚಾರಿ, ಭಕ್ತರಹಳ್ಳಿ ರವಿ, ಮೊದಲಾದವರು ನಟಿಸಿದ್ದಾರೆ.