ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ……
ಗಾಂಧಿ ಮತ್ತು ಅಂಬೇಡ್ಕರ್ ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಮತ್ತು ಈಗಲೂ ಹೆಚ್ಚು ಚರ್ಚೆಗೆ ಒಳಪಡುತ್ತಿರುವ  ಎರಡು ಮಹಾನ್ ವ್ಯಕ್ತಿತ್ವಗಳು. ಗಾಂಧಿವಾದ ಅಥವಾ ಅಂಬೇಡ್ಕರ್ ವಾದ ಅರ್ಥ ಮಾಡಿಕೊಳ್ಳಲು ಗಾಂಧಿಯ ಸಂಪೂರ್ಣ ವ್ಯಕ್ತಿ ಚಿತ್ರಣವನ್ನು, ಬಾಬಾ ಸಾಹೇಬರ ಸಂಪೂರ್ಣ ವ್ಯಕ್ತಿ ಚಿತ್ರಣವನ್ನು, ಅವರುಗಳು ದಾಖಲಿಸಿರುವ ಎಲ್ಲಾ ಬರಹಗಳು, ಭಾಷಣಗಳನ್ನು ಓದಿದ ಮಾತ್ರಕ್ಕೆ ಅವರಿಬ್ಬರು ದಕ್ಕುತ್ತಾರೆ ಎಂಬುದು ಒಂದು ಭ್ರಮೆ ಅಷ್ಟೇ.

ಕೇವಲ ಗಾಂಧಿಯನ್ನು ಓದಿದರೂ ಅಥವಾ ಕೇವಲ ಅಂಬೇಡ್ಕರ್ ಅವರನ್ನು ಓದಿದರೂ ಅಥವಾ ಇಬ್ಬರನ್ನು ಓದಿದರು ಅವರು ಅಷ್ಟು ಸುಲಭವಾಗಿ ಸಾಮಾನ್ಯ ಜ್ಞಾನಕ್ಕೆ ನಿಲುಕುವುದಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳಲು ಭಾರತದ ಸಂಪೂರ್ಣ ಇತಿಹಾಸ, ಇಲ್ಲಿನ ಸಾಮಾಜಿಕ ವ್ಯವಸ್ಥೆ, ಇಲ್ಲಿನ ಹೋರಾಟಗಳು, ಜನರ ಮಾನಸಿಕ ಸ್ಥಿತಿ, ರಾಜಕೀಯ ಪರಿಸ್ಥಿತಿ, ಮಾನವೀಯ ಮತ್ತು ಭಾರತದ ಸಾಂಸ್ಕೃತಿಕ ಮೌಲ್ಯಗಳು, ಇಂದಿನ ಸ್ಥಿತಿಗತಿಗಳು ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಬೇಕಾಗುತ್ತದೆ.

ಆಗಲೂ ಅವರು ಅರ್ಥವಾಗುವುದು ಕಷ್ಟ. ನಾವು ಪೂರ್ವಾಗ್ರಹ ಪೀಡಿತರಾಗದೆ, ವಿಶಾಲ ಮನೋಭಾವದಿಂದ ನೋ ಮ್ಯಾನ್ಸ್ ಲ್ಯಾಂಡ್ ಅಂದರೆ ತಟಸ್ಥ ಸ್ಥಳದಲ್ಲಿ ನಿಂತು ವಿಮರ್ಶೆಗೆ ಒಳಪಡಿಸಿಕೊಂಡರೆ, ಸಮಗ್ರವಾಗಿ ಅವರನ್ನು ಹಿಡಿದಿಡಲು ಪ್ರಯತ್ನಿಸಿದರೆ ಒಂದಷ್ಟು ಅರ್ಥವಾಗುತ್ತದೆ. ಅಷ್ಟು ತಾಳ್ಮೆ, ಸಮಯ, ಆಸಕ್ತಿ ಇದ್ದವರಿಗೆ ಮಾತ್ರ ಅದು ನಿಲುಕುತ್ತದೆ.

ಕೇವಲ ಓದು ಅಥವಾ ಅಧ್ಯಯನಕ್ಕಾಗಿ, ಭಕ್ತಿ ಅಥವಾ ಪೂಜ್ಯನೀಯ ಭಾವನೆಯಿಂದ, ಹೋರಾಟ ಅಥವಾ ನಾಯಕತ್ವ ರೂಪಿಸಿಕೊಳ್ಳಲು ಕಲಿಯುವಿಕೆಯಿಂದ ಅಥವಾ ತಮಗೆ ಅವರಿಂದ ಉಪಯೋಗವಾಗಿದೆ ಅಥವಾ ಪ್ರೇರಣೆಯಾಗಿದೆ ಎಂಬ ಕಾರಣದಿಂದ ಅವರನ್ನು ಅರಿತುಕೊಳ್ಳಲು ಪ್ರಯತ್ನಿಸಿದರೆ ಸ್ವಲ್ಪ ಭಾಗ ಮಾತ್ರ ಅರ್ಥವಾಗುತ್ತದೆ. ಏಕೆಂದರೆ ಅವರಿಬ್ಬರೂ ಬಹುತೇಕ ಭಾರತದ ಸಾಮಾಜಿಕ ದೃಷ್ಟಿಕೋನದ ಅದ್ಭುತ ಚಿಂತಕರು. ವಿಶ್ವದ ನಾಗರಿಕತೆಯ ಅತ್ಯುತ್ತಮ ಗುಣಲಕ್ಷಣಗಳನ್ನು ಎತ್ತಿ ಹಿಡಿದವರು. ಅದಕ್ಕೂ ಮಿಗಿಲಾಗಿ ಭಾರತವನ್ನು ಅತ್ಯಂತ ಕಠಿಣ ವಿಮರ್ಶೆಗೆ ಒಳಪಡಿಸಿದವರು ಮತ್ತು ಅಷ್ಟೇ ತೀವ್ರವಾಗಿ ಪ್ರಭಾವ ಬೀರಿದವರು.

ಅವರಿಬ್ಬರ ನಡುವಿನ ಸಂಘರ್ಷ ಕೂಡ ಏಕಮುಖವಲ್ಲ. ಅವರ ಭಿನ್ನಾಭಿಪ್ರಾಯದ ಉತ್ತುಂಗ ಎನ್ನಬಹುದಾದ ಪೂನಾ ಒಪ್ಪಂದವನ್ನು ಸಹ ದ್ವೇಷ, ಅಸೂಯೆಗಳನ್ನ ಮೀರಿದಅಂದಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ನೋಡಿದರೆ ಇಬ್ಬರ ಹೋರಾಟಗಳು ನಮಗೆ ಅರ್ಥವಾಗುತ್ತದೆ. ದೇಶ ಮತ್ತು ಧರ್ಮದ ರಕ್ಷಣೆ, ಸ್ವಾತಂತ್ರ್ಯ ಹೋರಾಟ ಮತ್ತು  ವಿಭಜನೆಯ ಭಯ ಗಾಂಧಿಯವರ ಹಠಕ್ಕೆ ಕಾರಣವಾದರೆ, ತನ್ನ ಸಮುದಾಯವನ್ನು ಶೋಷಣೆ ಮುಕ್ತ ಮಾಡಿ ಅವರಿಗೆ ಸ್ವಾತಂತ್ರ್ಯ ದಕ್ಕಿಸಿಕೊಡಲು ಬಾಬಾ ಸಾಹೇಬರು ಅಷ್ಟೇ ತೀವ್ರ ವಾದ ಮಂಡಿಸುತ್ತಾರೆ. ಈ ಕ್ಷಣಕ್ಕೂ ಆ ಎರಡು ವಾದಗಳು ಪ್ರಸ್ತುತವಾಗಿದೆ.

ಅತ್ಯಂತ ಕೆಟ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಆ ಇಬ್ಬರ ಹೋರಾಟಗಳಲ್ಲಿ ಯಾರಾದರೂ ಒಬ್ಬರನ್ನು ದೂರುವುದು ಸಣ್ಣತನವಾಗುತ್ತದೆ.  ಹಾಗೇನಾದರೂ ದೂರುವುದಾದರೆ ಭಾರತದ ಸಾಮಾಜಿಕ ವ್ಯವಸ್ಥೆಯನ್ನೇ ದೂರಬೇಕಾಗುತ್ತದೆ. ಅವರ ಸಂಘರ್ಷಕ್ಕೆ ಆ ವ್ಯವಸ್ಥೆಯ ಲೋಪದೋಷಗಳೇ ಕಾರಣ. ಅದನ್ನು ಗ್ರಹಿಸುವಲ್ಲಿ ಅಂಬೇಡ್ಕರ್ ವಾದ ಮತ್ತು ಗಾಂಧಿವಾದ ವಿಫಲವಾಗಿದೆ.

ಒಂದು ವಿಷಯವನ್ನು ಗ್ರಹಿಸಲು ಇತಿಹಾಸದ ಆ ಕಾಲಘಟ್ಟ, ಅದಕ್ಕೂ ಹಿಂದಿನ ಭೂತಕಾಲ, ಈ ಕ್ಷಣದ ವರ್ತಮಾನ ಮತ್ತು ಭವಿಷ್ಯದ ಆಲೋಚನೆಗಳು ಒಂದು ಪ್ರಮುಖ ಆಧಾರವೂ ಆಗಿರುತ್ತದೆ. ಅದನ್ನು ಗ್ರಹಿಸದೆ ಕೇವಲ ಈ ಕ್ಷಣದ ತಲ್ಲಣಗಳಿಗೆ ಇನ್ಯಾರನ್ನೋ ಬಲಿಪಶು ಮಾಡುವುದು ಇಂದಿನ ಅರೆಬೆಂದ ಮನಸ್ಥಿತಿಯ ಜನರಿಗೆ ಸಹಜವಾಗಿಯೇ ಕಾಣುತ್ತದೆ. ನಾವು ವಕೀಲಿಕೆಯನ್ನು ಮಾಡುತ್ತಾ ಒಬ್ಬರನ್ನು ಪ್ರೀತಿಸಲು, ಇನ್ನೊಬ್ಬರನ್ನು ದ್ವೇಷಿಸಲು ಸಾಕಷ್ಟು ಕಾರಣಗಳು ಸಿಗುತ್ತವೆ. ಆದರೆ ವಾಸ್ತವ ಅರಿಯಲು ವಕೀಲಿಕೆ ಖಂಡಿತವಾಗಲೂ ಸಾಕಾಗುವುದಿಲ್ಲ.

ಅನೇಕರು ಗಾಂಧಿಯನ್ನು ವಿರೋಧಿಸುತ್ತಾ ಗಾಂಧಿವಾದದ ವೈಫಲ್ಯವನ್ನು ಎತ್ತಿ ತೋರಿಸುತ್ತಾ ಪಟೇಲ್, ನೆಹರು, ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಮುಂತಾದವರೊಂದಿಗೆ ಗಾಂಧಿಯನ್ನು ಹೋಲಿಕೆ ಮಾಡುವುದಾಗಲಿ, ಹಾಗೆಯೇ ಇತ್ತೀಚಿನ ಒಳ ಮೀಸಲಾತಿಯ ವಿವಾದದಿಂದ ಅಂಬೇಡ್ಕರ್ ಅವರಿಗೆ ಪರ್ಯಾಯವಾಗಿ ಬಾಬು ಜಗಜೀವನ್ ರಾಮ್ ಅವರಿಗೆ ಹೆಚ್ಚು ಮಹತ್ವ ನೀಡಿ ವಿಮರ್ಶಿಸುವುದು ಅಷ್ಟು ಒಳ್ಳೆಯ ಬೆಳವಣಿಗೆಯಲ್ಲ.

ಗಾಂಧಿ ವಾದ ಮತ್ತು ಅಂಬೇಡ್ಕರ್ ವಾದ ವಿವಿಧ ಆಯಾಮಗಳನ್ನು ಪಡೆಯುತ್ತಾ, ಬೆಳೆಯುತ್ತಾ, ಘರ್ಷಣೆಗೆ ಒಳಪಡುತ್ತಾ, ವಿವಾದವಾಗುತ್ತಾ ಸಾಗುತ್ತಿದೆ.

ಗಾಂಧಿ ಮತ್ತು ಅಂಬೇಡ್ಕರ್ ….ವಿರೋಧಿಗಳೇ ? ಸ್ನೇಹಿತರೇ ? ಭಿನ್ನ ಅಭಿಪ್ರಾಯದವರೇ ? ಸ್ವಾರ್ಥಿಗಳೇ ? ಆದರ್ಶಗಳೇ ? ಪ್ರಸ್ತುತರೇ – ಅಪ್ರಸ್ತುತರೇ ? ದೇಶದ ಹಿತಾಸಕ್ತಿಗೆ ಮಾರಕವೇ  ಪೂರಕವೇ ? ಎಂಬ ಪ್ರಶ್ನೆಗಳ ಜೊತೆಗೆ….

ಅವರನ್ನು ಹೇಗೆ ಅರ್ಥೈಸಿಕೊಳ್ಳುವುದು ? ಎಷ್ಟು ಅಧ್ಯಯನ ಮಾಡಬೇಕು ? ಎಷ್ಟು ಚಿಂತನೆಗೆ ಒಳಪಡಬೇಕು ? ಎಷ್ಟು ಚರ್ಚಿಸಬೇಕು ? ಯಾವುದನ್ನು ಗ್ರಹಿಸಬೇಕು ? ಎಷ್ಟು ಅನುಭವ ಇರಬೇಕು ? ಯಾವ ಹಿನ್ನೆಲೆಯಲ್ಲಿ ಇದನ್ನು ಯೋಚಿಸಬೇಕು ? ಎಂಬುದು ಮುಖ್ಯವಾಗುತ್ತದೆ..ಅದಕ್ಕಾಗಿ ಒಂದು ಸರಳ ಕ್ರಮ ಮತ್ತು ಮಾನಸಿಕ ಕಸರತ್ತು…….

ಅದಕ್ಕಾಗಿ  ಕೆಲಹೊತ್ತು ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಮರೆತು ಗಾಂಧಿಯವರ ಹುಟ್ಟೂರು ಪೋರ್ ಬಂದರ್ ಗೆ ಮನಸ್ಸಿನಲ್ಲೇ ಪ್ರಯಾಣಿಸಿ. ಗಾಂಧಿ ಹುಟ್ಟಿದ 1869, ಆ ಕಾಲದ ಸಾಮಾಜಿಕ ಸ್ಥಿತಿಗತಿಗಳು, ಅದರ ಸುತ್ತಮುತ್ತಲಿನ ವಾತಾವರಣ ಗಮನಿಸಿ. ಅವರ ಓದು, ಬ್ಯಾರಿಸ್ಟರ್ ಪದವಿ, ದಕ್ಷಿಣ ಆಫ್ರಿಕಾದ ಹೋರಾಟ, ಭಾರತಕ್ಕೆ ಆಗಮನ, ಸ್ವಾತಂತ್ರ್ಯ ಚಳವಳಿ, ಕೊನೆಗೆ ಗುಂಡಿಗೆ ಬಲಿಯಾದ ಘಟನೆ ನೆನಪಿಸಿಕೊಳ್ಳಿ. ಸಾಧ್ಯವಾದರೆ ಅವರ ಆತ್ಮಕಥೆ 

” ಸತ್ಯದೊಂದಿಗೆ ನನ್ನ ಪ್ರಯೋಗ ” ಓದಿ. ಉದ್ದೇಶಪೂರ್ವಕವಾಗಿ ಅವರನ್ನು ಪ್ರೀತಿಸಿ. ಅವರ ಆತ್ಮವನ್ನು ಸಹಜವಾಗಿ ಪ್ರವೇಶಿಸಿ. ಅವರ ನೆಲೆಯಲ್ಲಿ ನಿಂತು ಯೋಚಿಸಿ. ಆ ಪ್ರಬುದ್ಧತೆ ನಿಮಗಿದೆ. ಅವರು ಆಗಿನ ಮೀಸಲಾತಿಯನ್ನು ವಿರೋಧಿಸಲು ಇರುವ ಕಾರಣ, ವರ್ಣಾಶ್ರಮ ಧರ್ಮ ಸಮರ್ಥಿಸಿದ ರೀತಿ, ನಂತರ ಅದನ್ನು ವಿರೋಧಿಸಿ ಬದಲಾಗಲು ಕಾರಣ, ಅವರ ಸರಳತೆ, ಸತ್ಯ, ಅಹಿಂಸೆ, ಸಂಘಟನೆ, ಪಾರದರ್ಶಕತೆ ಬಗ್ಗೆ ಗೌರವದಿಂದ ಅವಲೋಕಿಸಿ.

ಸ್ವಾತಂತ್ರ್ಯ ಹೋರಾಟಕ್ಕೆ ಸಿಕ್ಕ ಜಯಕ್ಕೆ ಅವರೆಷ್ಟು ಕಾರಣ ಎಂದು ವಿಶಾಲ ಮನೋಭಾವದಿಂದ ವಿಮರ್ಶಿಸಿ. ಮಹಾತ್ಮನಾಗಿ ಅಲ್ಲದಿದ್ದರೂ ಸಾಮಾನ್ಯನಾಗಿ ಅವರ ಹೋರಾಟ ಎಷ್ಟು ಕಷ್ಟದ್ದಿರಬಹುದೆಂದು ನಿಮಗೆ ನಿಲುಕಿದಷ್ಟು ಗ್ರಹಿಸಿ ..

ಹಾಗೆಯೇ ಇತ್ತ ಕಡೆ ಗಾಂಧಿಯನ್ನು ಇಷ್ಟ ಪಡುವವರು ಕೆಲಹೊತ್ತು ಗಾಂಧಿಯನ್ನು ಮರೆತುಬಿಡಿ. ನೇರ ಅಂಬೇಡ್ಕರ್ ಹುಟ್ಟಿದ ಅಂಬೇವಾಡಿಗೆ ಮನಸ್ಸಿನಲ್ಲೇ ಪ್ರಯಾಣಿಸಿ. ಆಗಿನ ಜಾತಿ ವ್ಯವಸ್ಥೆಯಲ್ಲಿ ಮಹರ್ ಜನಾಂಗದ ಹೀನಾಯ ಸ್ಥಿತಿ ಗಮನಿಸಿ. ಪ್ರಾಣಿಗಳಿಗಿಂತ ಹೀನಾಯವಾಗಿ ಕಾಣುತ್ತಿದ್ದ ಆಗಿನ ಕಾಲದ ಅಸ್ಪೃಶ್ಯರ ಬದುಕು ಗಮನಿಸಿ. ಆ ಸ್ಥಿತಿಯಿಂದಾಗಿ ಜಗತ್ತಿನ ಎಲ್ಲಾ ಧರ್ಮಗಳನ್ನು, ಗ್ರಂಥಗಳನ್ನು, ಸಂವಿಧಾನಗಳನ್ನು ಅರೆದು ಕುಡಿದು ಜೀರ್ಣಿಸಿಕೊಂಡ ಸಾಮಾನ್ಯನ ಜೀವನ ಕಲ್ಪಿಸಿಕೊಳ್ಳಿ.

ಆಗ ಅವರು ಅನುಭವಿಸಿದ ನೋವು ನಿಮಗಾಗಲಿ. ಅವರ ಕಾಲದ ಸಂದರ್ಭದಲ್ಲಿ ತನ್ನ ಜನಗಳಿಗಾಗಿ ಅವರ ಮಾಡಬಹುದಾದ ತ್ಯಾಗ, ಹೋರಾಟದ ಬಗ್ಗೆ , ಅವರ ಆತ್ಮ ಪ್ರವೇಶಿಸಿ ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ. ಅವರನ್ನು ನಿಮ್ಮವರೆಂದೇ ಪ್ರೀತಿಸಿ.

ಈಗ ಇಬ್ಬರಿಂದಲೂ ಹೊರಬಂದು ನಿಮ್ಮ ಇಂದಿನ ನೆಲೆಯಲ್ಲಿ, ಸಂಕೀರ್ಣವಾದ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನ ಹಿನ್ನೆಲೆಯಲ್ಲಿ ವಿಮರ್ಶಿಸಿ. ಯಾರಿಗೆ ಯಾವ ವಿಷಯ ಪ್ರಮುಖವಾಗಿತ್ತು ಮತ್ತು ಅದನ್ನು ಸಾಧಿಸಲು ಅವರಿಬ್ಬರೂ ಏನು ಮಾಡಿದರೆಂದು.

ಗಾಂಧಿಗೆ ದೇಶದ ಸ್ವಾತಂತ್ರ್ಯವೇ ಮುಖ್ಯವಾಗಿತ್ತು. ಬ್ರಿಟಿಷ್ ರನ್ನು ತೊಲಗಿಸಿ ನಂತರ ನಮ್ಮೊಳಗಿನ ಸಮಸ್ಯೆ ಮುಖ್ಯವಾಗಿ ಅಸ್ಪೃಶ್ಯತೆ ಮತ್ತು ಮೀಸಲಾತಿಯನ್ನು ಪರಿಹರಿಸಿಕೊಳ್ಳೋಣ. ಈ ಜನ ಹರಿಜನ ನನ್ನವರೇ, ಅವರನ್ನು ಬೇರೆ ಮಾಡುವುದು ಬೇಡ ಎಂಬ ಅತ್ಯಂತ ಆದರ್ಶ ಆಶಯ ಹೊಂದಿದ್ದರು. ಅದಕ್ಕಾಗಿ ತಮ್ಮೆಲ್ಲಾ ಶಕ್ತಿ, ಹೋರಾಟ, ಸಂಘಟನೆ, ಶ್ರಮವನ್ನು ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟರು  ಮತ್ತು ಅದೇ ಅವರ ಮುಖ್ಯ ಗುರಿಯಾಗಿತ್ತು.

 ಆದರೆ ವಾಸ್ತವವಾದಿ, ಆದರ್ಶಕ್ಕಿಂತ ನ್ಯೆಜ ಭಾರತೀಯ ಸಂಸ್ಕೃತಿಯ ಅರಿವಿದ್ದ ಅಂಬೇಡ್ಕರ್ ಅವರಿಗೆ, ಗಾಂಧಿಯ ಆದರ್ಶ ಅವರಿಗೆ ಮಾತ್ರ ಸೀಮಿತ. ಸಾಮಾನ್ಯ ಜನ ಅವರ ಆದರ್ಶದ ಹತ್ತಿರಕ್ಕೂ ಸುಳಿಯದ, ಶತಶತಮಾನಗಳ ಕ್ರೂರ ಜಾತಿ ವ್ಯವಸ್ಥೆಯಲ್ಲಿ ಮಲಿನಗೊಂಡ ಮನಸ್ಥಿತಿಗಳು ಎಂದು ಸ್ಪಷ್ಟವಾಗಿ ತಿಳಿದಿತ್ತು. ಅದಕ್ಕಾಗಿ ಅಂಬೇಡ್ಕರ್ ಪ್ರಾಮುಖ್ಯತೆ ಶೋಷಿತರ ಸ್ವಾತಂತ್ರ್ಯವಾಗಿತ್ತು. ಅದಿಲ್ಲದೆ ದೇಶದ ಸ್ವಾತಂತ್ರ್ಯ ನಿಷ್ಪ್ರಯೋಜಕ ಮತ್ತು ಅಪಾಯಕಾರಿ ಎಂಬ ಅರಿವಿತ್ತು. ಬ್ರಿಟಿಷರಿಗಿಂತ ಇಲ್ಲಿನ ಮೂಲಭೂತವಾದಿಗಳೇ ಅತ್ಯಂತ ಕ್ರೂರಿಗಳು ಎಂದು ಮನವರಿಕೆಯಾಗಿತ್ತು.

ಆ ಕಾರಣಕ್ಕಾಗಿ ಅವರು ಗಾಂಧಿಯನ್ನು ಗೌರವಿಸಿದರೂ ಕೆಲ ವಿಷಯಗಳಲ್ಲಿ ಉಗ್ರವಾಗಿ ವಿರೋಧಿಸಿದರು. ಅದು ಸರಿಯೂ ಆಗಿತ್ತು. ಒಂದು ವೇಳೆ ಗಾಂಧಿ, ಅಂಬೇಡ್ಕರ್ ಅವರನ್ನು ವೈಯಕ್ತಿಕವಾಗಿ ವಿರೋಧಿಸಿದ್ದರೆ ಆಗ ಅವರಿಗಿದ್ದ ಪ್ರಭಾವ ಉಪಯೋಗಿಸಿ ಅಂಬೇಡ್ಕರ್ ಅವರಿಗೆ ಸಿಕ್ಕ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷತೆ ಅಥವಾ ಇತರ ಪ್ರಮುಖ ಸ್ಥಾನ ತಪ್ಪಿಸಬಹುದಿತ್ತು. ನೆಹರು ಅವರ  ಬೆಂಬಲ ಅವರಿಗೆ ಇದ್ದೇ ಇತ್ತು. ಬಹುಶಃ ಗಾಂಧಿಯವರ ಉದ್ದೇಶ ಅದಿರಲಾರದು.
ನಾವು ಈಗ ಈ ಕ್ಷಣದಲ್ಲಿ ನಿಂತು ಅವರ ಸರಿ ತಪ್ಪುಗಳನ್ನು
, ಫಲಿತಾಂಶಗಳ ಆಧಾರದ ಮೇಲೆ ವಿಮರ್ಶಿಸಿ ತೀರ್ಪು ನೀಡುವುದು ಸತ್ಯದ ಒಂದು ಮುಖವಷ್ಟೇ ಆಗುತ್ತದೆ. ಇಬ್ಬರನ್ನೂ ಅವರು ಇದ್ದ ಹಾಗೆಯೇ ಸ್ವೀಕರಿಸಬೇಕು.

ಯಾರೂ ಪರಿಪೂರ್ಣರಲ್ಲ. ಇತಿಹಾಸದ ಅನೇಕ ನಿರ್ಧಾರಗಳು ಆ ಕಾಲಘಟ್ಟದಲ್ಲಿ ಸರಿ ಎನಿಸಿ ಕಾಲಾನಂತರದಲ್ಲಿ ತಪ್ಪು ಫಲಿತಾಂಶ ನೀಡಿರುವ ಅನೇಕ ಘಟನೆಗಳಿವೆ.

ಇಂದು ಅತ್ಯವಶ್ಯವಾಗಿರುವ, ಸಮಾನತೆಯ ಸಾಧನವಾಗಿರುವ ಕೆಲವು ಅಂಶಗಳು ಶತಮಾನಗಳ ನಂತರ ತಪ್ಪು ಎಂದು ಆಗಬಹುದು, ಭಾರತದ ವಿಭಜನೆಯ ಫಲಿತಾಂಶ ಕಾಲಕಾಲಕ್ಕೆ ಬದಲಾಗುತ್ತಿರಬಹುದು. ಇಂದಿನ ಹೀರೋ ನಾಳೆಯ ಖಳನಾಯಕನಾಗಬಹುದು, ಹೇಗೆ ಮನುವಾದ ಕೆಲಕಾಲ ಸಮಾಜವನ್ನು ಮುನ್ನಡೆಸಿ ಈಗ ಹೇಸಿಗೆ ಹುಟ್ಟಿಸುತ್ತಿದೆಯೋ, ದೇವರಿಗೆ ಸಮಾನರಂತಿದ್ದ ಪೂಜಾರಿಗಳು, ಮುಲ್ಲಾಗಳು, ಪಾದ್ರಿಗಳು ಈಗ ದೇವರ ದಲ್ಲಾಳಿಗಳಂತೆಯೂ, ಜ್ಯೋತಿಷಿಗಳು ತಮಾಷೆಯಾಗಿಯೂ, ಶೋಷಿತರು ಸ್ವಾಭಿಮಾನಿಗಳಂತೆಯೂ ಬಿಂಬಿತವಾಗುತ್ತಿಲ್ಲವೇ ಹಾಗೆ.

ಅದ್ದರಿಂದ ಇದು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಶ್ರಮಿಸಿ, ವಿಶ್ವಕ್ಕೆ ಸರಳತೆ, ಅಹಿಂಸೆ, ಸತ್ಯ, ಪಾರದರ್ಶಕತೆ ನೀಡಿದ ಗಾಂಧಿ,

ಅದೇ ರೀತಿ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದು ಸಮಾನತೆ, ಮಾನವೀಯತೆಯನ್ನು ವಿಶ್ವಕ್ಕೆ ಪರಿಚಯಿಸಿದ, ಒಂದು ಇಡೀ ಜನಾಂಗವನ್ನು ತಲೆಎತ್ತಿ ಬದುಕುವಂತೆ ಮಾಡಿದ ಅಂಬೇಡ್ಕರ್ ಅವರನ್ನು ಎದುರು ಬದುರು ನಿಲ್ಲಿಸದೆ ಸಮಾನಾಂತರವಾಗಿ ನಿಲ್ಲಿಸೋಣ. ಕೆಲವರು, ಅದರಲ್ಲೂ ಕೆಲವು ಆಕ್ರೋಶಗೊಂಡ ದಲಿತ ಮನಸುಗಳು ಗಾಂಧಿಯನ್ನು ದ್ವೇಷಿಸುವುದು ಮೂಲಭೂತವಾದದ ಇನ್ನೊಂದು ಮುಖವಾಗುತ್ತದೆ. ಗಾಂಧಿಯವರ ವಿಶಾಲ ಮನೋಭಾವ ಪ್ರಾಯೋಗಿಕ ಅಲ್ಲದಿರಬಹುದು (ಮೀಸಲಾತಿಗೆ ಸಂಬಂಧಿಸಿದಂತೆ) ಅದಕ್ಕಾಗಿ ಅವರ ಒಳ್ಳೆಯ ಗುಣಗಳನ್ನು ದ್ವೇಷಿಸುವುದು ಸರಿಯಲ್ಲ. ನನ್ನ ಪ್ರಕಾರ ಇಬ್ಬರೂ ಮಹಾನ್ ವ್ಯಕ್ತಿಗಳು ಮತ್ತು ತಮ್ಮ ಗುರಿ ಸಾಧನೆಗಾಗಿ ಹೋರಾಡಿದ ಹಠವಾದಿಗಳು.

ಇದು ಚರ್ಚೆಯ ಒಂದು ಸರಳ ನಿರೂಪಣೆ ಅಷ್ಟೇ. ಹೇಳಲು ಇನ್ನೂ  ಬಹಳಷ್ಟಿದೆ. ಚರ್ಚೆಗಳಿಗೆ ಮಿತಿಯಿಲ್ಲ. ಆದರೆ ಅನಿವಾರ್ಯವಾಗಿ ಇಂದಿನ ಪರಿಸ್ಥಿತಿಯನ್ನು ಗಮನಿಸಿ ಒಂದು ನಿರ್ಧಾರಕ್ಕೆ ಬರಬೇಕಾದ ಪರಿಸ್ಥಿತಿ ಇದೆ. ಇಲ್ಲದಿದ್ದರೆ ಘರ್ಷಣೆ ನಿರಂತರ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ಶುಭಾಶಯಗಳೊಂದಿಗೆ…….
ಲೇಖನ-ವಿವೇಕಾನಂದ. ಎಚ್.ಕೆ. 9844013068……

Share This Article
error: Content is protected !!
";