ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಂದುಳಿದ ವರ್ಗಗಳು ಸಾಥ್ ಕೊಡುತ್ತಲೇ ಬಂದಿವೆ. ಆದರೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಒತ್ತಾಯದೊಂದಿಗೆ ಹಿಂದುಳಿದ ವರ್ಗಗಳ ಸಮುದಾಯದ ಮಠಾಧೀಶರು ಮುನ್ನಡೆಸಿರುವ ಮಹತ್ವದ ಚಳವಳಿ ಕಲಬುರಗಿಯಲ್ಲಿ ಆರಂಭವಾಗಿದೆ.
ಹಿಂದುಳಿದ ವರ್ಗಗಳ ಸಮಾಜದ ಬ್ರಹ್ಮ ಶ್ರೀ ನಾರಾಯಣ ಗುರುಶಕ್ತಿಪೀಠದ ರಾಜ್ಯಾಧ್ಯಕ್ಷ ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಹಿಂದುಳಿದ ಮಠಾಧೀಶರ ಮಹಾಸಭೆ ಡಿಕೆಶಿವಕುಮಾರ್ ಪರ ಬಹಿರಂಗ ಬೆಂಬಲ ವ್ಯಕ್ತಪಡಿಸಿದೆ.
ಈ ಸಂಬಂಧ ಹತ್ತರಿಂದ ಹದಿನೈದು ಮಂದಿ ಮಠಾಧೀಶರು ಕಾಂಗ್ರೆಸ್ ಹೈಕಮಾಂಡ್‌ನಾಯಕರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳನ್ನಾಗಿ ಮಾಡುವಂತೆ ತಿಳಿಸಲಿದ್ದಾರೆ.
ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದೇ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಪ್ರಣವಾನಂದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಗೆ ಅವಕಾಶ ನೀಡದಿದ್ದರೆ ಪಕ್ಷ ಸರ್ವನಾಶದ ಹಾದಿಗೆ ಹೋಗುವ ಸಾಧ್ಯತೆ ಇದೆ ಎಂದೂ ಹಿಂದುಳಿದ ವರ್ಗಗಳ ಸಮಾಜಗಳ ಸ್ವಾಮೀಜಿಗಳು ಎಚ್ಚರಿಸಿದ್ದಾರೆ.

